
ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ-ಬಿಸ್ಲೆ ರಸ್ತೆಯ ಡಿಪ್ಪೋ ಎಂಬಲ್ಲಿ ಶನಿವಾರ (ಜೂನ್ ೧೩) ಮುಂಜಾನೆ ಪಿಕಪ್ ವಾಹನವೊಂದು ಆಯತಪ್ಪಿ ಬಿದ್ದ ಘಟನೆ ನಡೆದಿದ್ದು, ಇದರ ಬೆನ್ನಲ್ಲೇ ಅಕ್ರಮ ಜಾನುವಾರು ಸಾಗಾಟ ಜಾಲವೊಂದನ್ನು ಸುಬ್ರಹ್ಮಣ್ಯ ಪೊಲೀಸರು ಪತ್ತೆ ಹಚ್ಚಿದ್ದಾರೆ.


ಕೃ
ತ್ಯಕ್ಕೆ ಬಳಸಿದ ವಾಹನ ಹಾಗೂ ಎರಡು ಜಾನುವಾರುಗಳನ್ನು ರಕ್ಷಿಸಿರುವ ಪೊಲೀಸರು, ಹಾಸನ ಮೂಲದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹಾಸನ ಜಿಲ್ಲೆಯ ಅರಕಲಗೂಡು ನಿವಾಸಿಗಳಾದ ಚಾಲಕ ಚಂದ್ರು ಅಲಿಯಾಸ್ ಚಂದ್ರಶೇಖರ ಹಾಗೂ ಕ್ಲೀನರ್ ಮೋಹನ ಪೊಲೀಸ್ ವಶದಲ್ಲಿರುವವರು.
ಶನಿವಾರ ಬೆಳಿಗ್ಗೆ ಕುಲ್ಕುಂದ-ಬಿಸ್ಲೆ ರಸ್ತೆಯ ಡಿಪ್ಪೋ ಎಂಬಲ್ಲಿ ಪಿಕಪ್ ವಾಹನವೊಂದು ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿಬಿದ್ದಿತ್ತು. ಅಪಘಾತದ ಮಾಹಿತಿ ತಿಳಿದ ತಕ್ಷಣ ವಾಹನವನ್ನು ಹಾಗೂ ಅದರಲ್ಲಿದ್ದ ಚಾಲಕ ಮತ್ತು ಕ್ಲೀನರ್ನನ್ನು ಪೊಲೀಸರು ಠಾಣೆಗೆ ಕರೆತಂದಿದ್ದರು.ಪಿಕಪ್ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸಲಾಗುತ್ತಿತ್ತು ಎಂಬ ಖಚಿತ ಮಾಹಿತಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ (PSI) ಆಂಜನೇಯ ರೆಡ್ಡಿ ಅವರಿಗೆ ಲಭಿಸಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪಿಎಸ್ಐ ಅವರು, ಕೂಲಂಕುಷವಾಗಿ ವಿಚಾರಣೆಗೆ ಒಳಪಡಿಸಿದಾಗ ಅಸಲಿ ಕೃತ್ಯ ಬೆಳಕಿಗೆ ಬಂದಿದೆ.


ಓಡಿಸಲ್ಪಟ್ಟಿದ್ದ ಜಾನುವಾರುಗಳ ಪತ್ತೆ: ಯಾವುದೇ ಅಧಿಕೃತ ಪರವಾನಗಿ ಇಲ್ಲದೆ, ಕೇವಲ ಮಾಂಸ ಮಾಡಿ ಮಾರಾಟ ಮಾಡುವ ದುರುದ್ದೇಶದಿಂದ ಎರಡು ಜಾನುವಾರುಗಳನ್ನು ಅತ್ಯಂತ ಹಿಂಸಾತ್ಮಕವಾಗಿ ಪಿಕಪ್ ವಾಹನದಲ್ಲಿ ತುರುಕಿ ಸಾಗಿಸಲಾಗುತ್ತಿತ್ತು ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ. ರಸ್ತೆಯಲ್ಲಿ ವಾಹನ ಆಯತಪ್ಪಿ ಬಿದ್ದ ತಕ್ಷಣ ಸಾರ್ವಜನಿಕರಿಗೆ ಹಾಗೂ ಪೊಲೀಸರಿಗೆ ಸಿಕ್ಕಿಬೀಳುವ ಭಯದಿಂದ, ಆರೋಪಿಗಳು ಜಾನುವಾರುಗಳನ್ನು ವಾಹನದಿಂದ ಕೆಳಗಿಳಿಸಿ ಕಾಡಿನ ಕಡೆಗೆ ಓಡಿಸಿದ್ದರು. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸ್ ಸಿಬ್ಬಂದಿ, ಘಟನಾ ಸ್ಥಳದ ಸ್ವಲ್ಪ ದೂರದಲ್ಲೇ ಅಲೆದಾಡುತ್ತಿದ್ದ ಆ ಎರಡೂ ಜಾನುವಾರುಗಳನ್ನು ಪತ್ತೆ ಹಚ್ಚಿ ರಕ್ಷಿಸಿದ್ದಾರೆ.
:ರಕ್ಷಿಸಲಾದ ೦೨ ಜಾನುವಾರುಗಳು ಹಾಗೂ ಕೃತ್ಯಕ್ಕೆ ಬಳಸಿದ ಪಿಕಪ್ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಗೋವುಗಳ ಸಂರಕ್ಷಣಾ ಮತ್ತು ಜಾನುವಾರು ಪ್ರತಿಬಂಧಕ ಕಾಯ್ದೆ-೨೦೨೦ ,ಪ್ರಾಣಿ ಸಂರಕ್ಷಣಾ ಕಾಯ್ದೆ-೧೯೬೦, ಭಾರತೀಯ ಮೋಟಾರು ವಾಹನ ಕಾಯ್ದೆ-೧೯೮೮ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಈ ಜಾನುವಾರು ಸಾಗಾಟ ಜಾಲದ ಹಿಂದೆ ಬೇರೆ ಯಾರಾದರೂ ಕೈವಾಡವಿದೆಯೇ ಎಂಬ ನಿಟ್ಟಿನಲ್ಲಿ ಸುಬ್ರಹ್ಮಣ್ಯ ಪೊಲೀಸರು ತನಿಖೆ ಮುಂದುವರಿದಿದೆ.
