ಮನೆಯ ಅಂಗಳಕ್ಕೆ ಬಿದ್ದ ತೆಂಗಿನ ಮರ; ಕೂದಲೆಳೆಯ ಅಂತರದಲ್ಲಿ ಪಾರಾದ ವ್ಯಕ್ತಿ

kadaba times

ಮಳೆಗಾಲದ ಆರಂಭದಲ್ಲೇ ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಮಳೆ ಆರ್ಭಟಿಸುತ್ತಿದ್ದು, ಇದರ ನಡುವೆ ಸುಳ್ಯ ಸಮೀಪದ ಪೈಚಾರು ಎಂಬಲ್ಲಿ ನಡುಕ ಹುಟ್ಟಿಸುವ ಘಟನೆಯೊಂದು ಜೂನ್ 15 ರಂದು ಸಂಭವಿಸಿದೆ. ಮನೆಯ ಮುಂಭಾಗದಲ್ಲಿದ್ದ ತೆಂಗಿನ ಮರವೊಂದು ಇದ್ದಕ್ಕಿದ್ದಂತೆ ತುಂಡಾಗಿ ಬಿದ್ದಿದ್ದು, ಅಂಗಳದಲ್ಲಿದ್ದ ವ್ಯಕ್ತಿಯೊಬ್ಬರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

kadaba times
uniq

ಪೈಚಾರು ನಿವಾಸಿ ಶಾಫಿ ಪ್ರಗತಿ ಎಂಬವರ ಮನೆಯ ಮುಂಭಾಗದಲ್ಲಿ ಈ ಆತಂಕಕಾರಿ ಘಟನೆ ನಡೆದಿದೆ. ಶಾಫಿ ಅವರ ಹಿರಿಯ ಸಹೋದರ ಹಸೈನಾರ್ ಅವರು ಮೃತ್ಯುವಿನ ದವಡೆಯಿಂದ ಅದೃಷ್ಟವಶಾತ್ ಪಾರಾದ ವ್ಯಕ್ತಿಯಾಗಿದ್ದಾರೆ.

ಜೂನ್ 15ರಂದು ಸುಳ್ಯ ಪರಿಸರದಲ್ಲಿ ಉತ್ತಮ ಮಳೆಯಾಗುತ್ತಿತ್ತು. ಈ ವೇಳೆ ಶಾಫಿ ಪ್ರಗತಿ ಅವರ ಮನೆಯ ಸ್ಲ್ಯಾಬ್ ಮೇಲಿನಿಂದ ಬೀಳುತ್ತಿದ್ದ ಮಳೆ ನೀರನ್ನು ಬಕೆಟ್‌ನಲ್ಲಿ ತುಂಬಿಸಲು ಹಸೈನಾರ್ ಅವರು ಮನೆಯ ಅಂಗಳಕ್ಕೆ ಬಂದಿದ್ದರು. ಅವರು ಬಕೆಟ್ ಹಿಡಿದು ನೀರು ಹಿಡಿಯುತ್ತಿದ್ದ ಸಂದರ್ಭದಲ್ಲಿಯೇ, ಮನೆಯ ಮುಂಭಾಗದಲ್ಲಿದ್ದ ದೈತ್ಯ ತೆಂಗಿನ ಮರವು ತಳಭಾಗದಿಂದ ತುಂಡಾಗಿ ನೇರವಾಗಿ ಅವರ ಮೇಲೆಯೇ ಬೀಳಲು ಬಂದಿದೆ.

ಸಮಯಪ್ರಜ್ಞೆಯಿಂದ ಬದುಕುಳಿದ ಹಸೈನಾರ್

ಮರವು ಮುರಿದು ಬೀಳುವ ಶಬ್ದ ಕೇಳುತ್ತಿದ್ದಂತೆ ಎಚ್ಚೆತ್ತ ಹಸೈನಾರ್ ಅವರು ಅತ್ಯಂತ ಕ್ಷಿಪ್ರವಾಗಿ ಸಮಯಪ್ರಜ್ಞೆ ಮೆರೆದಿದ್ದಾರೆ. ಮರ ಬೀಳುವುದನ್ನು ಕಣ್ಣಾರೆ ಕಂಡು ತಕ್ಷಣವೇ ಅಲ್ಲಿಂದ ಹಿಂದಕ್ಕೆ ಓಡಿದ್ದಾರೆ. ಅವರು ಓಡಿದ ಮರುಕ್ಷಣವೇ ತೆಂಗಿನ ಮರವು ಅವರು ನಿಂತಿದ್ದ ಜಾಗಕ್ಕೇ ಬಿದ್ದಿದೆ. ಹಸೈನಾರ್ ಅವರು ಕೇವಲ ಒಂದು ಸೆಕೆಂಡ್ ತಡಮಾಡಿದ್ದರೂ ಭೀಕರ ದುರಂತವೊಂದು ಸಂಭವಿಸುತ್ತಿತ್ತು.

kadaba times
kadaba times

ತಾಯಿ ಕೂಡ ಪಾರು: ಈ ಘಟನೆ ಸಂಭವಿಸುವ ಕೆಲವೇ ನಿಮಿಷಗಳ ಮೊದಲು ಶಾಫಿ ಮತ್ತು ಹಸೈನಾರ್ ಅವರ ತಾಯಿಯವರು ಸಹ ಇದೇ ಜಾಗದಲ್ಲಿ ನಿಂತಿದ್ದರೆಂದು ತಿಳಿದುಬಂದಿದೆ. ಅವರು ಅಲ್ಲಿಂದ ಮನೆಯ ಒಳಗೆ ಹೋದ ಬೆನ್ನಲ್ಲೇ ಹಸೈನಾರ್ ಅಲ್ಲಿಗೆ ಬಂದಿದ್ದರು. ಹೀಗಾಗಿ ಇಡೀ ಕುಟುಂಬಕ್ಕೆ ಎದುರಾಗಿದ್ದ ದೊಡ್ಡದೊಂದು ಗಂಡಾಂತರ ತಪ್ಪಿದಂತಾಗಿದೆ.

ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ

ತೆಂಗಿನ ಮರವು ಅಂಗಳಕ್ಕೆ ಅಪ್ಪಳಿಸುವ ಮತ್ತು ಹಸೈನಾರ್ ಅವರು ಓಡಿ ಪ್ರಾಣ ಉಳಿಸಿಕೊಳ್ಳುವ ಇಡೀ ರೋಮಾಂಚನಕಾರಿ ದೃಶ್ಯವು ಮನೆಯ ಮುಂಭಾಗದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗುತ್ತಿದ್ದು, ಸಾರ್ವಜನಿಕರಲ್ಲಿ ಮಳೆಗಾಲದ ಅಪಾಯಗಳ ಕುರಿತು ಆತಂಕ ಮೂಡಿಸಿದೆ.ಮಳೆಗಾಲದಲ್ಲಿ ಇಂತಹ ಹಳೆಯ ಮರಗಳು ಹಾಗೂ ಒಣಗಿದ ಕೊಂಬೆಗಳು ಬೀಳುವ ಸಾಧ್ಯತೆ ಹೆಚ್ಚಿರುವುದರಿಂದ, ಸಾರ್ವಜನಿಕರು ಮನೆಯ ಸುತ್ತಮುತ್ತಲಿನ ಮರಗಳ ಬಗ್ಗೆ ಜಾಗ್ರತೆ ವಹಿಸಬೇಕಾಗಿ ಈ ಘಟನೆ ಎಚ್ಚರಿಸಿದೆ.

Related Articles

Latest Articles