
ಕಡಬ: “ಸರ್ಕಾರ ಬರತ್ತೆ, ಹೋಗತ್ತೆ.. ಜನಪ್ರತಿನಿಧಿಗಳು ಭರವಸೆ ನೀಡ್ತಾರೆ, ಮರೆತುಬಿಡ್ತಾರೆ. ಆದರೆ ನಮ್ಮ ರಸ್ತೆಯ ಹೊಂಡಗಳು ಮಾತ್ರ ಹಾಗೇ ಇರುತ್ತವೆ.” ಈ ಮಾತಿಗೆ ಬೇಸತ್ತ ಗ್ರಾಮಸ್ಥರು ಭಾನುವಾರ ಸ್ವತಃ ತಾವೇ ರಸ್ತೆಗಿಳಿದು, ಶ್ರಮದಾನದ ಮೂಲಕ ದಶಕಗಳ ಹಳೆಯ ರಸ್ತೆ ಸಮಸ್ಯೆಗೆ ತಾತ್ಕಾಲಿಕ ಮುಕ್ತಿ ಹಾಡಿದ್ದಾರೆ.


ಕಡಬ ತಾಲೂಕಿನ ಕೊಯಿಲ ಮತ್ತು ರಾಮಕುಂಜ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕ ರಸ್ತೆಯುದ್ದಕ್ಕೂ ಬಿದ್ದಿದ್ದ ಬೃಹತ್ ಹೊಂಡಗಳನ್ನು ಸ್ಥಳೀಯರು ರವಿವಾರ (ಭಾನುವಾರ) ಶ್ರಮಸೇವೆಯ ಮೂಲಕ ಮಣ್ಣು ಮತ್ತು ಜಲ್ಲಿಕಲ್ಲುಗಳನ್ನು ತುಂಬಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.
೨.೫ ಕಿ.ಮೀ ರಸ್ತೆ ಸಂಪೂರ್ಣ ಅಯೋಗ್ಯ: ಈ ರಸ್ತೆಯ ಗೋಳಿತ್ತಡಿಯಿಂದ ತ್ರಿವೇಣಿ ಸರ್ಕಲ್ ತನಕದ ಸುಮಾರು ೨.೫ ಕಿಲೋಮೀಟರ್ ದೂರದವರೆಗೆ ರಸ್ತೆಯುದ್ದಕ್ಕೂ ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣವಾಗಿ ಸಂಚಾರ ಸಂಪೂರ್ಣ ಅಯೋಗ್ಯವಾಗಿತ್ತು. ನಿತ್ಯವೂ ನೂರಾರು ವಾಹನಗಳು ಸಂಚರಿಸುವ ಈ ರಸ್ತೆಯು ಗೋಳಿತ್ತಡಿಯಿಂದ ಏಣಿತ್ತಡ್ಕ, ಕುದುಲೂರು, ಸಬಳೂರು, ಕಕ್ವೆ, ಪರಂಗಾಜೆ, ಕೊಲ್ಯ, ಸಂಕೇಶ ಸೇರಿದಂತೆ ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಕೊಂಡಿಯಾಗಿದೆ.
ವಾಟ್ಸಾಪ್ ಗ್ರೂಪ್ ಮೂಲಕ ಆರ್ಥಿಕ ನೆರವು: ರಸ್ತೆಯ ದುಃಸ್ಥಿತಿಯಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಅನುಭವಿಸುತ್ತಿದ್ದ ನರಕಯಾತನೆಗೆ ಮುಕ್ತಿ ಹಾಡಲು ಕೊಯಿಲ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ಚಿದಾನಂದ ಪಾನ್ಯಾಲು ಅವರು ಮುಂದಾಳತ್ವ ವಹಿಸಿದರು. ರಸ್ತೆ ದುರಸ್ತಿಗಾಗಿಯೇ ವಿಶೇಷ ವಾಟ್ಸಾಪ್ ಗ್ರೂಪ್ ಒಂದನ್ನು ರಚಿಸಿ, ಸಾರ್ವಜನಿಕರು ಹಾಗೂ ಉದಾರ ಮನಸ್ಸಿನ ದಾನಿಗಳಲ್ಲಿ ಆರ್ಥಿಕ ಸಹಾಯ ನೀಡುವಂತೆ ಮನವಿ ಮಾಡಲಾಗಿತ್ತು. ಇದಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ಹಲವು ದಾನಿಗಳು ಹಣ ಸೇರಿದಂತೆ ಇನ್ನಿತರ ರೂಪದಲ್ಲಿ ಸಹಾಯ ಹಸ್ತ ಚಾಚಿದ್ದಾರೆ.


ಬುಧವಾರದಿಂದಲೇ ಆರಂಭವಾಗಿತ್ತು ಕಾರ್ಯಚರಣೆ: ದಾನಿಗಳಿಂದ ಸಂಗ್ರಹವಾದ ಹಣವನ್ನು ಬಳಸಿಕೊಂಡು ಕಳೆದ ಬುಧವಾರದಿಂದಲೇ ಆಧುನಿಕ ಯಂತ್ರಗಳ (JCB) ಸಹಾಯದಿಂದ ರಸ್ತೆಯ ಇಕ್ಕೆಲಗಳಲ್ಲಿದ್ದ ಪೊದೆಗಳು, ಮರಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಅಷ್ಟೇ ಅಲ್ಲದೆ, ಮಳೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ನಿರ್ಮಾಣ ಕಾರ್ಯವೂ ಭಾನುವಾರದವರೆಗೆ ನಡೆದಿತ್ತು.
ರಸ್ತೆ ಬದಿ ಸರಿಪಡಿಸಿದ ಬಳಿಕ, ಭಾನುವಾರ ಬೆಳಿಗ್ಗೆಯಿಂದಲೇ ರಸ್ತೆಗಿಳಿದ ಸ್ಥಳೀಯರು ತಾವೇ ಸ್ವತಃ ಶ್ರಮದಾನದಲ್ಲಿ ತೊಡಗಿಸಿಕೊಂಡರು. ರಸ್ತೆಯಲ್ಲಿದ್ದ ದೊಡ್ಡ ದೊಡ್ಡ ಹೊಂಡಗಳಿಗೆ ಮಣ್ಣು ಮತ್ತು ಜಲ್ಲಿಕಲ್ಲುಗಳನ್ನು ಹಾಕಿ ಮುಚ್ಚುವ ಕಾರ್ಯ ಸಂಜೆಯವರೆಗೂ ಸಾಗಿತು. ದಾನಿಗಳ ಸಕಾರಾತ್ಮಕ ಸ್ಪಂದನೆ ಹಾಗೂ ಸ್ಥಳೀಯರ ಒಗ್ಗಟ್ಟಿನ ಶ್ರಮದಿಂದಾಗಿ ಇಂದು ಈ ರಸ್ತೆಯಲ್ಲಿ ನಿರಾಳವಾಗಿ ಸಂಚರಿಸುವಂತಾಗಿದೆ.
ದಶಕಗಳ ತೇಪೆ ಕಾರ್ಯಕ್ಕೆ ಬೇಕಿದೆ ಶಾಶ್ವತ ಮುಕ್ತಿ: ಸ್ಥಳೀಯರ ಪ್ರಕಾರ, “ಈ ರಸ್ತೆಗೆ ಪ್ರತಿವರ್ಷದಂತೆ ದಶಕಗಳಿಂದ ಒಂದಷ್ಟು ತೇಪೆ (ಪ್ಯಾಚ್ ವರ್ಕ್) ಕಾರ್ಯ ನಡೆಯುತ್ತಲೇ ಇರುತ್ತದೆ. ಆದರೆ ಪ್ರತಿ ಬಾರಿಯೂ ಮಳೆಗಾಲದ ಆರಂಭದಲ್ಲೇ ಈ ತೇಪೆ ಕಿತ್ತು ಹೋಗಿ ಮತ್ತದೇ ಹೊಂಡಗಳು ಬಾಯ್ತೆರೆದುಕೊಳ್ಳುತ್ತವೆ.” ಸ್ಥಳೀಯ ನಾಗರಿಕರು ಒಟ್ಟಾಗಿ ಸೇರಿ ತಮ್ಮ ಸಮಸ್ಯೆಯನ್ನು ತಾವೇ ಬಗೆಹರಿಸಿಕೊಂಡಿರುವುದು ಶ್ಲಾಘನೀಯವಾದರೂ, ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಹಾಗೂ ಜನಪ್ರತಿನಿಧಿಗಳು ಇನ್ನು ಮುಂದಾದರೂ ಎಚ್ಚೆತ್ತುಕೊಂಡು ಈ ಪ್ರಮುಖ ಸಂಪರ್ಕ ರಸ್ತೆಗೆ ಶಾಶ್ವತ ಡಾಂಬರೀಕರಣ ಅಥವಾ ಕಾಂಕ್ರೀಟ್ ರಸ್ತೆ ನಿರ್ಮಿಸಿಕೊಡಬೇಕಿದೆ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
