
ಕಡಬ: ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ನಾಗರಿಕರು ಕೊನೆಗೂ ತಾವೇ ರಸ್ತೆ ದುರಸ್ತಿ ಕಾರ್ಯಕ್ಕೆ ಕೈಹಾಕಿರುವ ಘಟನೆ ಕಡಬ ತಾಲೂಕಿನ ಕೊಯಿಲ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ಗೋಳಿತ್ತಡಿ – ಸಬಳೂರು – ಕುದುಲೂರು ರಸ್ತೆಯು ಸಂಪೂರ್ಣವಾಗಿ ಹೊಂಡ-ಗುಂಡಿಗಳಿಂದ ಕಂಗೆಟ್ಟಿದ್ದು, ಸಾರ್ವಜನಿಕರೇ ಒಟ್ಟಾಗಿ ರಸ್ತೆ ರಿಪೇರಿ ಮಾಡುತ್ತಿದ್ದಾರೆ.


ವಿಶೇಷವೆಂದರೆ, ಈ ರಸ್ತೆಯ ಅಭಿವೃದ್ಧಿಗೆ ಲಕ್ಷಾಂತರ ರೂಪಾಯಿ ಅನುದಾನ ಬಿಡುಗಡೆಯಾಗಿದ್ದರೂ, ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಕಾಮಗಾರಿ ಮಾತ್ರ ಇನ್ನೂ ಹಳ್ಳ ಹಿಡಿದಿದೆ.
ಸ್ಥಳೀಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಶಿಫಾರಸಿನ ಮೇರೆಗೆ ಈ ರಸ್ತೆಯ ಮರು ಡಾಂಬರೀಕರಣಕ್ಕಾಗಿ ಬರೋಬ್ಬರಿ 40 ಲಕ್ಷ ರೂಪಾಯಿ ಅನುದಾನ ಮಂಜೂರಾಗಿತ್ತು. ಆದರೆ ತಾಂತ್ರಿಕ ಕಾರಣಗಳು ಹಾಗೂ ಡಾಂಬರು ಕೊರತೆಯ ನೆಪ ಒಡ್ಡಿ ಇಲಾಖೆಯು ಕಾಮಗಾರಿಯನ್ನು ನನೆಗುದಿಗೆ ಇಟ್ಟಿದೆ. ವರ್ಷದ ಹಿಂದೆ ಈ ರಸ್ತೆಗೆ ತೇಪೆ ಹಾಕಿ ಹೊಂಡ ಮುಚ್ಚಲಾಗಿತ್ತಾದರೂ, ಈಗ ಮತ್ತೆ ಬೃಹತ್ ಹೊಂಡಗಳು ಸೃಷ್ಟಿಯಾಗಿವೆ. ಇದರಿಂದಾಗಿ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಡಾಂಬರೀಕರಣ ವಿಳಂಬಕ್ಕೆ ಇಲಾಖೆಯ ಅಧಿಕಾರಿಗಳು ಜಾಗತಿಕ ಮಟ್ಟದ ಕಾರಣಗಳನ್ನು ನೀಡುತ್ತಿದ್ದಾರೆ. ಜಾಗತಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಡಾಂಬರು ಕೊರತೆ ಉಂಟಾಗಿ ಕೆಲಸ ಸ್ಥಗಿತಗೊಂಡಿದೆ ಎಂದು ಅಧಿಕಾರಿಗಳು ಸಮರ್ಥಿಸಿಕೊಳ್ಳುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.


ಈ ರಸ್ತೆಗೆ ಸುಮಾರು 36 ವರ್ಷಗಳ ಹಿಂದೆ ಸಂಪೂರ್ಣ ಡಾಂಬರೀಕರಣ ಮಾಡಲಾಗಿತ್ತು. ಅದಾದ ಬಳಿಕ ಒಂಬತ್ತು ವರ್ಷಗಳ ಹಿಂದೆ ನಬಾರ್ಡ್ (NABARD) ಯೋಜನೆಯಡಿ 34 ಲಕ್ಷ ರೂಪಾಯಿ ವೆಚ್ಚದಲ್ಲಿ ಮರು ಡಾಂಬರೀಕರಣ ಮಾಡಲಾಗಿತ್ತಾದರೂ, ಕಳಪೆ ಕಾಮಗಾರಿಯಿಂದಾಗಿ ಕೇವಲ 2 ತಿಂಗಳಲ್ಲೇ ರಸ್ತೆ ಸಂಪೂರ್ಣ ಕಿತ್ತುಹೋಗಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ವರ್ಷವೂ ಮಳೆ ಹಾನಿ ಯೋಜನೆಯಡಿ 40 ಲಕ್ಷ ರೂ. ಬಿಡುಗಡೆಯಾಗಿದ್ದರೂ ಕೇವಲ ಒಂದು ಕಿಲೋಮೀಟರ್ ರಸ್ತೆ ಮಾತ್ರ ದುರಸ್ತಿ ಕಂಡಿದೆ.
ತಾಳ್ಮೆ ಕಳೆದುಕೊಂಡು ಶ್ರಮದಾನಕ್ಕೆ ಇಳಿದ ಗ್ರಾಮಸ್ಥರು
“ಕೇವಲ ಹೋರಾಟ, ಮನವಿ ಹಾಗೂ ಪ್ರತಿಭಟನೆಗಳಿಂದ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ನಾವೇ ಸ್ವತಃ ಹಣ ಸಂಗ್ರಹಿಸಿ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದೇವೆ” ಎಂದು ಸ್ಥಳೀಯರು ದೃಢ ನಿರ್ಧಾರ ಮಾಡಿದ್ದಾರೆ.ಅದರಂತೆ ಬುಧವಾರ ಜೆಸಿಬಿ ಯಂತ್ರದ ಮೂಲಕ ರಸ್ತೆ ಬದಿಯ ಪೊದೆ, ಗಿಡಗಂಟಿಗಳನ್ನು ತೆರವುಗೊಳಿಸಿ ಚರಂಡಿ ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮುಂಬರುವ ಭಾನುವಾರ ಸಾರ್ವಜನಿಕರೆಲ್ಲರೂ ಸೇರಿ ಶ್ರಮದಾನದ ಮೂಲಕ ರಸ್ತೆಯ ಹೊಂಡಗಳನ್ನು ಮುಚ್ಚಲು ಗ್ರಾಮಸ್ಥರು ತೀರ್ಮಾನಿಸಿದ್ದಾರೆ.
ಗೋಳಿತ್ತಡಿಯಿಂದ ಎಣೆತಡ್ಡಿ, ಕಕ್ವೆ, ಕುದುಲೂರು, ಕೊಯ್ಲ, ಸಬಳೂರು, ಬೂಡಲೂರು ಸೇರಿದಂತೆ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸುಮಾರು 3 ಕಿಲೋಮೀಟರ್ ದೂರದ ಈ ರಸ್ತೆ ಸಂಪೂರ್ಣ ಹಾಳಾಗಿದ್ದು, ಸಾರ್ವಜನಿಕರೇ ಈಗ ರಸ್ತೆ ಉಳಿಸುವ ಹೋರಾಟಕ್ಕೆ ಇಳಿದಿದ್ದಾರೆ.
