
ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ಅಂತ್ಯಸಂಸ್ಕಾರ ಪ್ರಕರಣಗಳ ಕುರಿತ ತನಿಖೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ವಿಶೇಷ ತನಿಖಾ ದಳಕ್ಕೆ (ಎಸ್ಐಟಿ) ನಿರ್ದೇಶನ ನೀಡಬೇಕು ಎಂದು ಕೋರಿ ಪ್ರಕರಣದ ಆರೋಪಿ ಸಿ.ಎನ್. ಚಿನ್ನಯ್ಯ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.


ಕ್ಷೇತ್ರದ ವಿರುದ್ಧ ವ್ಯವಸ್ಥಿತ ಪಿತೂರಿ ನಡೆಸಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ತನಿಖೆಯನ್ನು ಆದಷ್ಟು ಬೇಗ ಮುಗಿಸಿ ಅಂತಿಮ ವರದಿ ಸಲ್ಲಿಸಲು ಎಸ್ಐಟಿಗೆ ಸೂಚಿಸಬೇಕು ಎಂದು ಕೋರಿ ಅವರು ರಿಟ್ ಅರ್ಜಿಯನ್ನು ಸಲ್ಲಿಸಿದ್ದಾರೆ.
ಮಂಡ್ಯ ಮೂಲದ, ಪ್ರಸ್ತುತ ಧರ್ಮಸ್ಥಳದಲ್ಲಿ ವಾಸ್ತವ್ಯ ಹೂಡಿರುವ ಸಿ.ಎನ್. ಚಿನ್ನ (50) ಈ ಅರ್ಜಿ ಸಲ್ಲಿಸಿದ್ದು, “ಈ ಇಡೀ ಪ್ರಕರಣದಲ್ಲಿ ನನ್ನೊಬ್ಬನನ್ನೇ ಬಲಿಪಶು ಮಾಡಲಾಗಿದೆ. ಆದರೆ ಇದರ ಹಿಂದೆ ವ್ಯವಸ್ಥಿತವಾಗಿ ಪಿತೂರಿ ನಡೆಸಿದ ಮುಖ್ಯ ಸೂತ್ರಧಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಈ ನಿಟ್ಟಿನಲ್ಲಿ ನ್ಯಾಯಯುತ ಮತ್ತು ಶೀಘ್ರ ಕ್ರಮ ಕೈಗೊಳ್ಳಲು ಎಸ್ಐಟಿಗೆ ನಿರ್ದೇಶನ ನೀಡಬೇಕು” ಎಂದು ಅರ್ಜಿಯಲ್ಲಿ ವಿನಂತಿಸಿದ್ದಾರೆ.
ತಮ್ಮ ಅರ್ಜಿಯಲ್ಲಿ ತನಿಖೆಯ ವೈಫಲ್ಯಗಳನ್ನು ಎತ್ತಿ ತೋರಿಸಿರುವ ಚಿನ್ನಯ್ಯ, “ಪ್ರಕರಣದ ಹಿಂದೆ ಇರುವ ನಿಜವಾದ ಆರೋಪಿಗಳು ಯಾರು ಎಂಬುದನ್ನು ಸ್ಪಷ್ಟವಾಗಿ ಹೆಸರಿಸಿದ್ದರೂ ಕೂಡ ಎಸ್ಐಟಿ ಇದುವರೆಗೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಇಷ್ಟೇ ಅಲ್ಲದೆ, ಪ್ರಕರಣದ ಪ್ರಾಥಮಿಕ ವರದಿಯಲ್ಲಿ (Preliminary Report) ಯಾರ ಹೆಸರುಗಳಿದ್ದವೋ, ಅವರ ಮೇಲೆ ಸರಿಯಾದ ರೀತಿಯಲ್ಲಿ ತನಿಖೆಯನ್ನೇ ನಡೆಸಲಾಗಿಲ್ಲ” ಎಂದು ಗಂಭೀರವಾಗಿ ಆರೋಪಿಸಿದ್ದಾರೆ.


ಜೂನ್ 29ಕ್ಕೆ ವಿಚಾರಣೆ ಮುಂದೂಡಿಕೆ: ಈ ರಿಟ್ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ನ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠವು ಗುರುವಾರ ನಡೆಸಿತು. ಕೆಲ ಕಾಲ ಅರ್ಜಿದಾರರ ಪರ ವಾದ ಆಲಿಸಿದ ನ್ಯಾಯಪೀಠವು, ಪ್ರತಿವಾದಿಗಳಾದ ರಾಜ್ಯ ಗೃಹ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP), ಎಸ್ಐಟಿ ಮುಖ್ಯಸ್ಥರು ಹಾಗೂ ಧರ್ಮಸ್ಥಳ ಪೊಲೀಸರಿಗೆ ತುರ್ತು ನೋಟಿಸ್ ಜಾರಿಗೊಳಿಸಿದೆ. ಅಲ್ಲದೆ, ಮುಂದಿನ ವಿಚಾರಣೆಯನ್ನು ಜೂನ್ 29ಕ್ಕೆ ಮುಂದೂಡಿದೆ.
