
ಪುತ್ತೂರಿನಲ್ಲಿ ದಾಖಲಾಗಿ ನಂತರ ವರ್ಗಾವಣೆಯಾಗಿದ್ದ ಪೋಕ್ಸೋ ಮತ್ತು ಎಸ್ಸಿ-ಎಸ್ಟಿ ಪ್ರಕರಣದ ಆರೋಪಿ ಸಾಲ್ಮರ ನಿವಾಸಿ ತರುಣ್ಗೆ ಮಂಗಳೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಪ್ರಕರಣದ ವಿವರ ಇಲ್ಲಿದೆ


ಅಪ್ರಾಪ್ತ ವಯಸ್ಕಳನ್ನು ಗರ್ಭವತಿಯನ್ನಾಗಿಸಿದ ಆರೋಪದಡಿ ಬಂಧಿತನಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸಾಲ್ಮರದ ಯುವಕನಿಗೆ ಮಂಗಳೂರಿನ ನ್ಯಾಯಾಲಯವು ಜಾಮೀನು ಮಂಜೂರು ಮಾಡಿ ಆದೇಶಿಸಿದೆ.
ಪುತ್ತೂರಿನ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರು ತನ್ನ ಅಪ್ರಾಪ್ತ ಪುತ್ರಿ ಗರ್ಭವತಿಯಾಗಿರುವ ಬಗ್ಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನಲ್ಲಿ, ತನ್ನ ಮಗಳಿಗೆ ಸಾಲ್ಮರ ನಿವಾಸಿ ತರುಣ್ ಎಂಬಾತನ ಪರಿಚಯವಿದ್ದು, ಆತ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ತೋಟದ ಕೆಲಸ ಮಾಡುತ್ತಿದ್ದ ಎಂದು ತಿಳಿಸಿದ್ದರು. 2025ರ ಮಾರ್ಚ್ ತಿಂಗಳಲ್ಲಿ ಮಗಳು ಮೂಡಿಗೆರೆಗೆ ಕೆಲಸಕ್ಕೆ ತೆರಳಿದ್ದಳು. ಆ ಬಳಿಕ ತಾನು ಗರ್ಭಿಣಿಯಾಗಿರುವುದಾಗಿ ತಾಯಿಗೆ ತಿಳಿಸಿದ್ದಳು.
ವಯಸ್ಸಿನ ಗೊಂದಲ ಮತ್ತು ದೂರು: ಆರಂಭದಲ್ಲಿ ಮಗಳಿಗೆ 19 ವರ್ಷ ಪ್ರಾಯವಾಗಿದೆ ಎಂದು ಭಾವಿಸಿದ್ದ ತಾಯಿ, ಇಬ್ಬರಿಗೂ ಮದುವೆ ಮಾಡುವ ಆಲೋಚನೆ ಮಾಡಿದ್ದರು. ಆದರೆ, ವೈದ್ಯಕೀಯ ತಪಾಸಣೆ ಮತ್ತು ಶಾಲಾ ದಾಖಲಾತಿಗಳನ್ನು ಪರಿಶೀಲಿಸಿದಾಗ ಬಾಲಕಿಗೆ ಇನ್ನೂ ಹದಿನೆಂಟು ವರ್ಷ ತುಂಬದಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಅಪ್ರಾಪ್ತೆಯ ಮೇಲೆ ದೈಹಿಕ ದೌರ್ಜನ್ಯ ಎಸಗಿದ ಆರೋಪದಡಿ ತರುಣ್ ವಿರುದ್ಧ ಕಾನೂನು ಕ್ರಮಕ್ಕೆ ತಾಯಿ ಒತ್ತಾಯಿಸಿದ್ದರು.


ಘಟನೆಯು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನಡೆದಿದ್ದರಿಂದ, ಪುತ್ತೂರು ಮಹಿಳಾ ಠಾಣೆಯಲ್ಲಿ ದಾಖಲಾಗಿದ್ದ ‘ಝೀರೋ ಎಫ್ಐಆರ್’ ಅನ್ನು ಚಿಕ್ಕಮಗಳೂರು ಡಿಸಿಆರ್ಇ ಠಾಣೆಗೆ ವರ್ಗಾಯಿಸಲಾಯಿತು. ಅಲ್ಲಿಂದ ಪ್ರಕರಣವು ದಕ್ಷಿಣ ಕನ್ನಡ ಜಿಲ್ಲಾ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ವರ್ಗಾವಣೆಯಾಗಿತ್ತು. ಆರೋಪಿ ವಿರುದ್ಧ ಬಿಎನ್ಎಸ್ ಕಲಂ 65(1), ಪೋಕ್ಸೋ ಕಾಯ್ದೆ ಹಾಗೂ ಎಸ್ಸಿ-ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ಪೊಲೀಸರು ಆತನನ್ನು ಬಂಧಿಸಿದ್ದರು.
ಜಾಮೀನು ಮಂಜೂರು: ಈ ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ ನ್ಯಾಯಾಲಯವು ಈಗ ಆರೋಪಿಗೆ ಜಾಮೀನು ಮಂಜೂರು ಮಾಡಿದೆ. ಆರೋಪಿ ಪರವಾಗಿ ವಕೀಲರಾದ ಪ್ರಸಾದ್ ಕುಮಾರ್ ರೈ ಉಪ್ಪಿನಂಗಡಿ, ಶ್ರೀಹರಿ ಪುತ್ತೂರು ಮತ್ತು ಕೃಷ್ಣದೇವ ಮಂಗಳೂರು ವಾದ ಮಂಡಿಸಿದ್ದರು. ಪ್ರತಿವಾದವನ್ನು ಆಲಿಸಿದ ನ್ಯಾಯಾಲಯವು ಶರತ್ತುಬದ್ಧ ಜಾಮೀನು ನೀಡಿದೆ.
