
ಕಡಬ ತಾಲೂಕಿನಲ್ಲಿ ನಡೆಯುತ್ತಿರುವ ಮತಾಂತರ ಷಡ್ಯಂತರದ ವಿರುದ್ಧ ವಿಎಚ್ಪಿ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ಎಚ್ಚರಿಕೆ. ಪೊಲೀಸರು ಕ್ರಮ ಕೈಗೊಳ್ಳದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು


ಕಡಬ: ತಾಲೂಕಿನ ಹಲವು ಗ್ರಾಮಗಳಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ವ್ಯವಸ್ಥಿತವಾಗಿ ಮತಾಂತರ ಮಾಡುವ ಷಡ್ಯಂತರ ನಡೆಯುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆಗೆ ದೂರು ನೀಡಲಾಗುವುದು. ತಕ್ಷಣವೇ ಮತಾಂತರದ ಅಡ್ಡೆಗಳನ್ನು ಪತ್ತೆಹಚ್ಚಿ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಉಗ್ರ ಪ್ರತಿಭಟನೆ ಎದುರಿಸಬೇಕಾದೀತು ಎಂದು ವಿಶ್ವಹಿಂದೂ ಪರಿಷತ್ (VHP) ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ಎಚ್ಚರಿಸಿದ್ದಾರೆ.
ಸೋಮವಾರ ಕಡಬದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಸಮಾಜದ ಬಡತನ ಮತ್ತು ದೌರ್ಬಲ್ಯಗಳನ್ನು ಬಂಡವಾಳ ಮಾಡಿಕೊಂಡು ವಿವಿಧ ಆಮಿಷಗಳನ್ನು ಒಡ್ಡುವ ಮೂಲಕ ಮತಾಂತರ ಯತ್ನಗಳು ನಡೆಯುತ್ತಿವೆ ಎಂದು ತೀವ್ರ ಅಕ್ರೋಶ ವ್ಯಕ್ತಪಡಿಸಿದರು.
ಕೆರ್ಮಾಯಿ ಘಟನೆ ಮತ್ತು ಪೊಲೀಸ್ ತನಿಖೆ: ಇತ್ತೀಚೆಗೆ ಕಡಬ ಠಾಣಾ ವ್ಯಾಪ್ತಿಯ ಕೆರ್ಮಾಯಿಯ ಮನೆಯೊಂದರಲ್ಲಿ ಬೆಂಗಳೂರು ಮೂಲದವರನ್ನು ಕರೆತಂದು ಗುಪ್ತವಾಗಿ ಪ್ರಾರ್ಥನೆ ಮತ್ತು ಮತಾಂತರ ಯತ್ನ ನಡೆಸುತ್ತಿರುವ ಬಗ್ಗೆ ಕಾರ್ಯಕರ್ತರು ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಮತಾಂತರ ಯತ್ನ ನಡೆದಿರುವುದು ದೃಢಪಟ್ಟಿದೆ. ನಾಲ್ಕು ತಿಂಗಳ ಹಿಂದೆ ಇವರನ್ನು ಮತಾಂತರ ಮಾಡಿ ಧರ್ಮ ಬೋಧನೆ ಮಾಡಲಾಗುತ್ತಿತ್ತು. ಆದರೆ ಪೊಲೀಸರಿಗೆ ಹೇಳಿಕೆ ನೀಡುವಾಗ 20 ವರ್ಷಗಳ ಹಿಂದೆಯೇ ಮತಾಂತರವಾಗಿರುವುದಾಗಿ ಸುಳ್ಳು ಹೇಳಿಕೆ ನೀಡಿ ದಾರಿ ತಪ್ಪಿಸಲಾಗಿದೆ ಎಂದು ಅವರು ಆರೋಪಿಸಿದರು.


“ನಮ್ಮ ಕಾರ್ಯಕರ್ತರು ಪ್ರತಿ ಗ್ರಾಮ ಮತ್ತು ಬೂತ್ ಮಟ್ಟದಲ್ಲಿ ನಿಗಾವಹಿಸಿದ್ದಾರೆ. ಮತಾಂತರದ ಅಡ್ಡೆಗಳನ್ನು ಪತ್ತೆಹಚ್ಚಿ ಪೊಲೀಸರು ಕಠಿಣ ಕ್ರಮ ಜರುಗಿಸಬೇಕು. ಒಂದು ಹಂತದವರೆಗೆ ನಾವು ಸಹಿಸುತ್ತೇವೆ, ಪರಿಸ್ಥಿತಿ ಕೈಮೀರಿದರೆ ಅದಕ್ಕೆ ಜಿಲ್ಲಾಡಳಿತವೇ ಹೊಣೆಯಾಗಬೇಕಾದೀತು.” — ನವೀನ್ ನೆರಿಯ, ಜಿಲ್ಲಾ ಕಾರ್ಯದರ್ಶಿ, ವಿಎಚ್ಪಿ.
ಮಾದಿಗ ಸಮುದಾಯವೇ ಟಾರ್ಗೆಟ್: ಕೋಲಾರ, ತುಮಕೂರು ಮತ್ತು ಬೆಂಗಳೂರು ಜಿಲ್ಲೆಗಳಿಂದ ಮಾದಿಗ ಸಮುದಾಯದವರನ್ನು ಗುರಿಯಾಗಿಸಿಕೊಂಡು ಈ ಭಾಗಕ್ಕೆ ಕರೆತರಲಾಗುತ್ತಿದೆ. ಅಲ್ಲಿ ಹಿಂದುತ್ವ ಗಟ್ಟಿಯಾಗಿರುವುದರಿಂದ ಇವರ ಆಟ ನಡೆಯುವುದಿಲ್ಲ, ಹಾಗಾಗಿ ಇಲ್ಲಿನ ಗ್ರಾಮೀಣ ಭಾಗಗಳಲ್ಲಿ ಗುಪ್ತವಾಗಿ ಮತಾಂತರ ಗಟ್ಟಿಗೊಳಿಸುವ ಕೆಲಸ ನಡೆಯುತ್ತಿದೆ. ಕಳೆದ 2-3 ತಿಂಗಳಲ್ಲಿ ಸುಮಾರು 12 ಮತಾಂತರ ಪ್ರಕರಣಗಳು ಬೆಳಕಿಗೆ ಬಂದಿದ್ದು, 15 ರಿಂದ 20 ಹಿಂದೂ ಯುವತಿಯರನ್ನು ಮತಾಂತರಿಸಿ ಮದುವೆಯಾಗಿರುವ ಮಾಹಿತಿ ಲಭ್ಯವಾಗಿದೆ ಎಂದು ನವೀನ್ ವಿವರಿಸಿದರು.
ಹೋರಾಟದ ಎಚ್ಚರಿಕೆ: ಮತಾಂತರದ ಸವಾಲನ್ನು ವಿಎಚ್ಪಿ ಮೊದಲಿನಿಂದಲೂ ಎದುರಿಸುತ್ತಾ ಬಂದಿದೆ. ಪಂಜದ ಒಂದು ಕುಟುಂಬವನ್ನು ಆಮಿಷವೊಡ್ಡಿ ಮತಾಂತರ ಮಾಡಲಾಗಿತ್ತು, ಅವರನ್ನು ಮತ್ತೆ ಸ್ವಧರ್ಮಕ್ಕೆ (ಘರ್ ವಾಪಾಸಿ) ಕರೆತರುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಪೊಲೀಸರು ಈ ಕೂಡಲೇ ಮತಾಂತರ ಕೇಂದ್ರಗಳನ್ನು ಬಂದ್ ಮಾಡಬೇಕು, ಇಲ್ಲದಿದ್ದರೆ ಜಿಲ್ಲಾಡಳಿತವು ಮುಂದಿನ ಪ್ರತಿಭಟನೆಯ ಬಿಸಿ ಎದುರಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು.
