ಬೆಳ್ಳಾರೆ: ಕೋಳಿ ಅಂಕದ ಅಡ್ಡೆಗೆ ಪೋಲೀಸರ ದಾಳಿ; ಮೂವರ ಬಂಧನ, 13 ವಾಹನಗಳು ವಶಕ್ಕೆ

kadaba times

ಬೆಳ್ಳಾರೆ ಪೊಲೀಸರಿಂದ ಮುಪ್ಪೇರಿಯಾದಲ್ಲಿ ಕೋಳಿ ಅಂಕದ ಮೇಲೆ ದಾಳಿ. 3 ಆರೋಪಿಗಳ ಬಂಧನ, ಕಾರು, ಬೈಕ್ ಸೇರಿ ₹7.72 ಲಕ್ಷ ಮೌಲ್ಯದ ಸೊತ್ತು ಜಪ್ತಿ

kadaba times
uniq

ಬೆಳ್ಳಾರೆ: ಸುಳ್ಯ ತಾಲೂಕಿನ ಮುಪ್ಪೇರಿಯಾ ಗ್ರಾಮದ ಪಜಂಬಿಲ ಎಂಬಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕದ ಜೂಜಾಟದ ಅಡ್ಡೆಗೆ ಬೆಳ್ಳಾರೆ ಪೊಲೀಸರು ದಾಳಿ ನಡೆಸಿ, ಮೂವರು ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಮೇ 9ರಂದು ಸಂಜೆ ಸುಳ್ಯ ತಾಲೂಕಿನ ಮುಪ್ಪೇರಿಯಾ ಗ್ರಾಮದ ಪಜಂಬಿಲ ಎಂಬ ಸಾರ್ವಜನಿಕ ಸ್ಥಳದಲ್ಲಿ ಕೋಳಿಗಳ ಕಾಲಿಗೆ ಬಾಳುಕತ್ತಿ ಕಟ್ಟಿ, ಹಣವನ್ನು ಪಣಕ್ಕಿಟ್ಟು ಜೂಜಾಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಮಾಹಿತಿಯ ಮೇರೆಗೆ ಬೆಳ್ಳಾರೆ ಪೊಲೀಸ್ ಉಪ ನಿರೀಕ್ಷಕರಾದ (PSI) ಈರಯ್ಯ ಡಿ.ಎನ್. ಅವರ ನೇತೃತ್ವದ ತಂಡ ಸಂಜೆ ಸುಮಾರು 6:33ಕ್ಕೆ ಸ್ಥಳಕ್ಕೆ ಅನಿರೀಕ್ಷಿತ ದಾಳಿ ನಡೆಸಿತು.

ಪೊಲೀಸರನ್ನು ಕಂಡ ಕೂಡಲೇ ಅಂಕದಲ್ಲಿದ್ದ 10 ರಿಂದ 15 ಮಂದಿ ಪರಾರಿಯಾಗಿದ್ದು, ಮೂವರು ಆರೋಪಿಗಳನ್ನು ಸ್ಥಳದಲ್ಲೇ ಬಂಧಿಸಲಾಗಿದೆ. ಬಂಧಿತರನ್ನು ಮುರುಳ್ಯ ಗ್ರಾಮದ ಜಯಪ್ರಕಾಶ (38), ಮುಪ್ಪೇರಿಯಾ ಗ್ರಾಮದ ಸುದರ್ಶನ ಎಂ. (42) ಮತ್ತು ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಜಯಪ್ರಕಾಶ (42) ಎಂದು ಗುರುತಿಸಲಾಗಿದೆ. ತಲೆಮರೆಸಿಕೊಂಡಿರುವ ಕಿಶೋರ್ ಹಾಗೂ ಇತರರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

kadaba times
kadaba times

ದಾಳಿಯ ವೇಳೆ ಪೊಲೀಸರು ಒಟ್ಟು ₹7,72,350 ಮೌಲ್ಯದ ಸೊತ್ತುಗಳನ್ನು ಜಪ್ತಿ ಮಾಡಿದ್ದಾರೆ. 1 ಮಾರುತಿ ಸುಜುಕಿ ರಿಟ್ಜ್ ಕಾರು, 2 ಆಟೋ ರಿಕ್ಷಾ ಹಾಗೂ 10 ವಿವಿಧ ಕಂಪನಿಯ ದ್ವಿಚಕ್ರ ವಾಹನಗಳು (ಒಟ್ಟು 13 ವಾಹನಗಳು). ₹1,350 ನಗದು ಹಣ, ಎರಡು ಕೋಳಿ ಬಾಳುಗಳು (ಕತ್ತಿ) ಹಾಗೂ ಒಂದು ಜೀವಂತ ಹುಂಜವನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಗಳ ವಿರುದ್ಧ ಕರ್ನಾಟಕ ಪೊಲೀಸ್ ಆಕ್ಟ್, ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಕಾರ್ಯಾಚರಣೆಯಲ್ಲಿ ಎಎಸ್ಐ ರವೀಂದ್ರ ಹೆಚ್.ಆರ್. ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.

Related Articles

Latest Articles