
ಕಡಬ ಪೇಟೆಯ ದುರ್ಗಾಂಬಿಕಾ ದೇವಸ್ಥಾನದ ಬಳಿ ಮದ್ಯ ಸೇವಿಸಿ ಸಾರ್ವಜನಿಕರಿಗೆ ಅಪಾಯವಾಗುವಂತೆ ಸ್ಕೂಟರ್ ಚಲಾಯಿಸುತ್ತಿದ್ದ ಜೋಜಿ ಕೆ.ಜೆ ಎಂಬಾತನನ್ನು ಕಡಬ ಪೊಲೀಸರು ಬಂಧಿಸಿದ್ದಾರೆ.


ಕಡಬ: ಸಾರ್ವಜನಿಕ ರಸ್ತೆಯಲ್ಲಿ ಅತಿಯಾಗಿ ಮದ್ಯ ಸೇವಿಸಿ, ಇತರರ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಕಡಬ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆಯ ವಿವರ: ಫೆ 20 ರಂದು ಸಂಜೆ ಪೊಲೀಸ್ ಠಾಣೆಯ ಸಿಬ್ಬಂದಿ ಮಹೇಶ್ ಎಚ್.ಬಿ. ಅವರು ಕರ್ತವ್ಯ ನಿಮಿತ್ತ ಕಡಬ ಪೇಟೆಯ ದುರ್ಗಾಂಬಿಕಾ ದೇವಸ್ಥಾನದ ಬಳಿ ಇದ್ದರು. ಈ ವೇಳೆ ಕಡಬ-ಉಪ್ಪಿನಂಗಡಿ ಸಾರ್ವಜನಿಕ ರಸ್ತೆಯಲ್ಲಿ ವ್ಯಕ್ತಿಯೊಬ್ಬ ತನ್ನ ಹೋಂಡಾ ಆಕ್ಟಿವಾ ಸ್ಕೂಟರನ್ನು ಅಜಾಗರೂಕತೆಯಿಂದ ಮತ್ತು ಅಡ್ಡಾದಿಡ್ಡಿಯಾಗಿ ಚಲಾಯಿಸುತ್ತಿರುವುದು ಕಂಡುಬಂದಿದೆ.


ಅಪಘಾತ ಸಂಭವಿಸುವ ಮುನ್ಸೂಚನೆ ಅರಿತ ಪೊಲೀಸ್ ಸಿಬ್ಬಂದಿ ಕೂಡಲೇ ವಾಹನವನ್ನು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಸವಾರ ಸರಿಯಾಗಿ ಮಾತನಾಡಲಾಗದ ಸ್ಥಿತಿಯಲ್ಲಿದ್ದು, ಆತನ ಬಾಯಿಯಿಂದ ಮದ್ಯದ ವಾಸನೆ ಬರುತ್ತಿತ್ತು. ಕೂಡಲೇ ಆತನನ್ನು ಠಾಣೆಗೆ ಕರೆದೊಯ್ದು ಬ್ರೀತ್ ಅನಾಲಿಜರ್ (Breathalyzer) ಪರೀಕ್ಷೆಗೆ ಒಳಪಡಿಸಿದಾಗ, ಆತನ ದೇಹದಲ್ಲಿ ಮದ್ಯದ ಪ್ರಮಾಣವು 461Mg/100ml ಇರುವುದು ದೃಢಪಟ್ಟಿದೆ.
ವಶಕ್ಕೆ ಪಡೆದ ಆರೋಪಿಯನ್ನು ಕೋಡಿಂಬಾಳ ಗ್ರಾಮದ ಅಜ್ಜಿಕಟ್ಟೆ ನಿವಾಸಿ ಜೋಜಿ ಕೆ.ಜೆ (34 ವರ್ಷ) ಎಂದು ಗುರುತಿಸಲಾಗಿದೆ. ಈತ ಕೆ.ವಿ. ಜೋಯ್ ಎಂಬವರ ಪುತ್ರ ಎಂದು ತಿಳಿದುಬಂದಿದೆ. ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023 ರ ಸೆಕ್ಷನ್ 281 ಹಾಗೂ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 185 ರ ಅಡಿಯಲ್ಲಿ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಸ್ತುತ ಹೆಡ್ ಕಾನ್ಸ್ಟೆಬಲ್ ರೋಹಿತಾಶ್ವ ಕೆ. ಅವರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
