
ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳಂದೂರಿನ ಬಾಡಿಗೆ ಮನೆಯೊಂದರಲ್ಲಿ ಕೇರಳ ಮೂಲದ ಬಿಜುಲಾಲ್ (38) ಎಂಬುವವರು ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಬೆಳ್ಳಾರೆ: ಕಡಬ ತಾಲೂಕಿನ ಬೆಳಂದೂರು ಗ್ರಾಮದ ಕೆಲೆಂಬಿರಿ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಕೇರಳ ಮೂಲದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತರನ್ನು ಕೇರಳ ನಿವಾಸಿ ಮಧು ಎಂಬವರ ಪುತ್ರ ಬಿಜುಲಾಲ್ ಎಂ. ಎಸ್. ಎಂದು ಗುರುತಿಸಲಾಗಿದೆ.
ಬೆಳಂದೂರು ಗ್ರಾಮದ ಕೆಲೆಂಬಿರಿಯ ಬಿ.ಎ. ವಸಂತ ಎಂಬವರ ಮಾಲೀಕತ್ವದ ಮನೆಯನ್ನು ಸುಮಾರು ಒಂದು ವರ್ಷದ ಹಿಂದೆ ಮಧು ಎಂಬವರು ಬಾಡಿಗೆಗೆ ಪಡೆದಿದ್ದರು. ಈ ಮನೆಯಲ್ಲಿ ಮಧು, ಅವರ ತಾಯಿ ಹಾಗೂ ಇಬ್ಬರು ಪುತ್ರರಾದ ಬಿಜುಲಾಲ್ ಮತ್ತು ಬೈಜು ವಾಸವಿದ್ದರು. ಸುಮಾರು 5 ತಿಂಗಳ ಹಿಂದೆ ಮಧು ಅವರು ಅನಾರೋಗ್ಯದ ಕಾರಣ ಕೇರಳಕ್ಕೆ ತೆರಳಿದ್ದು, ಆ ಬಳಿಕ ಬಿಜುಲಾಲ್ ಒಬ್ಬರೇ ಈ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಮೃತ ಬಿಜುಲಾಲ್ ಅವರು ಮದ್ಯವ್ಯಸನಿಯಾಗಿದ್ದು, ಯಾವುದೇ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇರುತ್ತಿದ್ದರು ಎನ್ನಲಾಗಿದೆ. ಫೆಬ್ರವರಿ 18ರಂದು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಅವರು ಮನೆಯ ಎದುರಿನ ರಸ್ತೆಯಲ್ಲಿ ಓಡಾಡಿಕೊಂಡಿರುವುದನ್ನು ಮನೆಯ ಮಾಲೀಕರು ಗಮನಿಸಿದ್ದರು.


ಫೆಬ್ರವರಿ 19ರಂದು ಬೆಳಿಗ್ಗೆ 11 ಗಂಟೆಯಾದರೂ ಬಿಜುಲಾಲ್ ವಾಸವಿದ್ದ ಕೋಣೆಯ ಹೊರಭಾಗದ ಲೈಟ್ ಉರಿಯುತ್ತಿರುವುದನ್ನು ಗಮನಿಸಿದ ಮಾಲೀಕ ವಸಂತ ಅವರು, ಸಂಶಯಗೊಂಡು ಹೋಗಿ ಕರೆದಿದ್ದಾರೆ. ಕೋಣೆಯ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಒಳಗೆ ಹೋಗಿ ನೋಡಲಾಗಿ, ಬೆಡ್ರೂಮಿನ ಫ್ಯಾನಿಗೆ ಹಗ್ಗದಿಂದ ನೇಣು ಬಿಗಿದುಕೊಂಡು ಬಿಜುಲಾಲ್ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ತಕ್ಷಣವೇ ಘಟನೆಯ ಬಗ್ಗೆ ಕೇರಳದಲ್ಲಿರುವ ಮೃತನ ತಾಯಿಗೆ ಮಾಹಿತಿ ನೀಡಲಾಗಿದ್ದು, ಅವರ ಸೂಚನೆಯಂತೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣವನ್ನು ಯುಡಿಆರ್ ನಂಬ್ರ: 09/2026, ಕಲಂ: 194 ಬಿ.ಎನ್.ಎಸ್.ಎಸ್ (BNSS) 2023 ಅಡಿಯಲ್ಲಿ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
