
ದಾರಿಮಧ್ಯೆ ಆಂಬುಲೆನ್ಸ್ನಲ್ಲಿ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನರ್ಸ್ಗಳಾದ ಕುಮುದಾ ಮತ್ತು ಸೌಮ್ಯಾ ಅವರ ಸಾಹಸಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.


ಹೆರಿಗೆಗಾಗಿ ಆಸ್ಪತ್ರೆಗೆ ತೆರಳುತ್ತಿದ್ದ ದಾರಿಮಧ್ಯೆ ಆಂಬುಲೆನ್ಸ್ನಲ್ಲೇ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ ಅಪರೂಪದ ಮತ್ತು ಮಾನವೀಯ ಘಟನೆ ಸೋಮವಾರ ಬೆಳಗ್ಗಿನ ಜಾವ ಬೆಳ್ತಂಗಡಿಯಿಂದ ವರದಿಯಾಗಿದೆ
ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಯ ಸುದೆಮುಗೇರು ನಿವಾಸಿ ಲೀಲಾವತಿ ಎಂಬುವವರೇ ಆಂಬುಲೆನ್ಸ್ನಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ. ಇಂದು ಬೆಳಗ್ಗಿನ ಜಾವ ಲೀಲಾವತಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದರಿಂದ ವೈದ್ಯರು ಅವರನ್ನು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದರು.
ವೈದ್ಯರ ಸಲಹೆಯಂತೆ ಲೀಲಾವತಿ ಅವರನ್ನು ಇಬ್ಬರು ಶುಶ್ರೂಷಕಿಯರೊಂದಿಗೆ ಆಸ್ಪತ್ರೆಯ ತುರ್ತು ವಾಹನದಲ್ಲಿ ಮಂಗಳೂರಿಗೆ ಕಳುಹಿಸಿಕೊಡಲಾಯಿತು. ಆಂಬುಲೆನ್ಸ್ ಬಂಟ್ವಾಳ ತಾಲೂಕಿನ ಫರಂಗಿಪೇಟೆ ಸಮೀಪಿಸುತ್ತಿದ್ದಂತೆ ಲೀಲಾವತಿ ಅವರಿಗೆ ಹೆರಿಗೆ ನೋವು ವಿಪರೀತವಾಯಿತು. ಆಸ್ಪತ್ರೆಗೆ ತಲುಪುವವರೆಗೆ ಕಾಯುವುದು ಅಸಾಧ್ಯವೆಂದು ಮನಗಂಡ ಸಿಬ್ಬಂದಿ ಕೂಡಲೇ ಕಾರ್ಯಪ್ರವೃತ್ತರಾದರು.


ಆಂಬುಲೆನ್ಸ್ನಲ್ಲಿದ್ದ ಶುಶ್ರೂಷಕಿಯರಾದ ಸಿಸ್ಟರ್ ಕುಮುದಾ ಮತ್ತು ಸಿಸ್ಟರ್ ಸೌಮ್ಯಾ ಎಸ್. ಅವರು ಸಮಯಪ್ರಜ್ಞೆ ಮೆರೆದು ಚಲಿಸುವ ವಾಹನದಲ್ಲೇ ಸುರಕ್ಷಿತವಾಗಿ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾದರು. ಲೀಲಾವತಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ಪ್ರಸ್ತುತ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.
ಚಾಲಕನ ಸಮಯಪ್ರಜ್ಞೆಗೆ ಶ್ಲಾಘನೆ: ಆಂಬುಲೆನ್ಸ್ ಚಾಲಕ ದಿನೇಶ್ ಗೌಡ ಅವರು ಅತ್ಯಂತ ಜಾಗರೂಕತೆಯಿಂದ ಮತ್ತು ವೇಗವಾಗಿ ವಾಹನ ಚಲಾಯಿಸಿ, ಮಗು ಜನಿಸಿದ ತಕ್ಷಣ ತಾಯಿ-ಮಗುವನ್ನು ಲೇಡಿಗೋಷನ್ ಆಸ್ಪತ್ರೆಗೆ ತಲುಪಿಸಿದ್ದಾರೆ. ತುರ್ತು ಸಂದರ್ಭದಲ್ಲಿ ಚಾಲಕ ಮತ್ತು ಶುಶ್ರೂಷಕಿಯರು ತೋರಿದ ಈ ಕರ್ತವ್ಯನಿಷ್ಠೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.
