ಕಡಬ: ಇಂದಿಗೂ ಬಯಲು ಶೌಚಾಲಯವೇ ಗತಿ: ಹೈಸ್ಕೂಲ್ ವಿದ್ಯಾರ್ಥಿನಿಯ ಗೋಳು ಕೇಳುವವರೇ ಇಲ್ಲವೇ?

ಸುಳ್ಯ ಶಾಸಕಿಯ ಸ್ವಕ್ಷೇತ್ರದಲ್ಲೇ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಕುಟುಂಬ ದುಸ್ಥಿತಿ

kadaba times

ಸುಳ್ಯ ವಿಧಾನಸಭಾ ಕ್ಷೇತ್ರದ ಕಾಣಿಯೂರಿನಲ್ಲಿ ದಲಿತ ಕುಟುಂಬವೊಂದು ದಶಕಗಳಿಂದ ಶೌಚಾಲಯವಿಲ್ಲದೆ ಪರದಾಡುತ್ತಿದೆ. ಚಿರತೆ ಭಯದ ನಡುವೆಯೂ ಹೆಣ್ಣು ಮಕ್ಕಳು ಬಯಲಿಗೆ ಹೋಗುವ ಸ್ಥಿತಿ ಇದ್ದರೂ ಪಂಚಾಯತ್ ಆಡಳಿತ ಮೌನವಾಗಿದೆ. ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ.

kadaba times
uniq

ಕಡಬ/ಕಾಣಿಯೂರು: ಡಿಜಿಟಲ್ ಇಂಡಿಯಾ ಮತ್ತು ಸ್ವಚ್ಛ ಭಾರತ್ ಅಭಿಯಾನದ ಅಬ್ಬರದ ನಡುವೆಯೂ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದ ಕಾಣಿಯೂರಿನಲ್ಲಿ ಅತ್ಯಂತ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ . ಸುಳ್ಯ ಶಾಸಕಿಯ ಸ್ವಕ್ಷೇತ್ರದಲ್ಲೇ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಕುಟುಂಬವೊಂದು ಇಂದಿಗೂ ಶೌಚಾಲಯವಿಲ್ಲದೆ ಬಯಲು ಶೌಚವನ್ನೇ ಅವಲಂಬಿಸಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಿದೆ.

ಕಾಣಿಯೂರು ಗ್ರಾಮದ ಅಬಿಕರ ಎಂಬಲ್ಲಿ  ದಲಿತ ಕುಟುಂಬವೊಂದು ಅನುಭವಿಸುತ್ತಿರುವ ನರಕಯಾತನೆ ಈಗ ಸಮಾಜದ ಕಣ್ಣು ತೆರೆಸುವಂತಿದೆ. ಕಳೆದ ಸುಮಾರು 50 ವರ್ಷಗಳಿಂದ ಈ ಪ್ರದೇಶದಲ್ಲಿ ವಾಸವಾಗಿರುವ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಕುಂಞ-ಲತಾ ದಂಪತಿಗಳು ಮತ್ತು ಮಕ್ಕಳು ವಾಸ ಇರುವ ಮನೆಗೆ  ಇಂದಿಗೂ ಸ್ವಂತ ಶೌಚಾಲಯವಿಲ್ಲ.ವಾಸವಿರುವ ಬಗ್ಗೆ ಎಲ್ಲಾ ದಾಖಲೆಗಳಿದ್ದರೂ ಈ ಕುತುಂಬ ಸೌಲಭ್ಯಗಳಿಂದ ವಂಚಿತವಾಗಿದೆ. ಇತ್ತೀಚೆಗೆ ಮನೆ ಹಾನಿಗೊಳಗಾದ ಹಿನ್ನೆಲೆ ಕಂದಾಯ ಇಲಾಖೆಯಿಂದ ಮರು ನಿರ್ಮಾಣಕ್ಕೆ ಅನುದಾನ ಒದಗಿಸಿದೆ.   ಹೈಸ್ಕೂಲ್ ವಿದ್ಯಾರ್ಥಿನಿಯೂ ಸೇರಿದಂತೆ ಮನೆ ಮಂದಿ ಇಂದಿಗೂ ಗುಡ್ಡದ ಮೇಲಿನ ಬಯಲು ಪ್ರದೇಶವನ್ನೇ ಶೌಚಕ್ಕಾಗಿ ಅವಲಂಬಿಸಿದ್ದಾರೆ.

ಸಾಮಾಜಿಕ ಮುಂದಾಳು  ರಾಘವ ಕಳಾರ ಅವರು ದಾರಿಯ ಸಮಸ್ಯೆಯನ್ನು ಪರಿಹರಿಸಲು ಹೋದಾಗ, ಮನೆಯವರು ತಮ್ಮ ಈ ಮೂಲಭೂತ ಸಂಕಷ್ಟವನ್ನು ಅವರ ಮುಂದೆ ಬಿಚ್ಚಿಟ್ಟಿದ್ದಾರೆ. ಕಾಡು ಮತ್ತು ಗುಡ್ಡದ ನಡುವೆ ಇರುವ ಈ ಮನೆಯವರು ಶೌಚಾಲಯವಿಲ್ಲದ ಕಾರಣ ಅನಿವಾರ್ಯವಾಗಿ ಬಯಲಿಗೆ ಹೋಗುತ್ತಿದ್ದಾರೆ.ಅದರಲ್ಲೂ ಹೈಸ್ಕೂಲ್ ವಿದ್ಯಾರ್ಥಿನಿ ಮಾನ ಮರ್ಯಾದೆಗೆ ಅಂಜಿ ಬೆಳ್ಳಂಬೆಳಗ್ಗೆ ಬಯಲು ಶೌಚಕ್ಕೆ ಹೋಗಬೇಕಾದ ಸ್ಥಿತಿ ಇದೆ.   ಇತ್ತೀಚೆಗೆ ಇದೇ ಕಾಣಿಯೂರು ಮತ್ತು ಎಡಮಂಗಲ ಪರಿಸರದಲ್ಲಿ ಚಿರತೆ ಸಂಚಾರ ಪತ್ತೆಯಾಗಿ ಜನರು ಭೀತಿಯಲ್ಲಿರುವಾಗಲೇ, ಈ ಕುಟುಂಬದ ಹೆಣ್ಣು ಮಕ್ಕಳು ಜೀವ ಕೈಯಲ್ಲಿ ಹಿಡಿದು ಬಯಲಿಗೆ ಹೋಗಬೇಕಾದ ದುಸ್ಥಿತಿ ಇದೆ.

kadaba times
kadaba times

ಕಿವುಡಾದ ಪಂಚಾಯತ್ ಆಡಳಿತ: ಈ ಬಗ್ಗೆ ಸಂತ್ರಸ್ತ ಕುಟುಂಬವು ಕಾಣಿಯೂರು ಗ್ರಾಮ ಪಂಚಾಯತ್‌ಗೆ ಹಲವು ಬಾರಿ ಮನವಿ ಸಲ್ಲಿಸಿದೆ. ಇದೀಗ ಮತ್ತೆ  ಮನೆ ಯಜಮಾನಿ  ಲತಾ ಎಂಬುವವರು ಇತ್ತೀಚೆಗಷ್ಟೇ  ಲಿಖಿತವಾಗಿ ಅರ್ಜಿ ನೀಡಿ, ತಮ್ಮ ಮನೆಯ ಪರಿಸ್ಥಿತಿಯನ್ನು ವಿವರಿಸಿ ಶೌಚಾಲಯ ಹಾಗೂ ನೀರಿನ ವ್ಯವಸ್ಥೆ ಮಾಡಿಕೊಡುವಂತೆ ಕೇಳಿಕೊಂಡಿದ್ದಾರೆ. ಆದರೆ, ಸ್ಥಳೀಯ ಆಡಳಿತವಾಗಲಿ ಅಥವಾ ಜನಪ್ರತಿನಿಧಿಗಳಾಗಲಿ  ಈವರೆಗೆ ಯಾವುದೇ ಸ್ಪಂದನೆ ನೀಡಿಲ್ಲ ಎನ್ನಲಾಗಿದೆ.

ಪರಿಶಿಷ್ಟ ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರ ಕೋಟ್ಯಂತರ ರೂಪಾಯಿ ವ್ಯಯಿಸುತ್ತಿದ್ದರೂ, ಈ ಕುಟುಂಬಕ್ಕೆ ಕನಿಷ್ಠ ಮೂಲಭೂತ ಸೌಕರ್ಯವೂ ತಲುಪದಿರುವುದು ಸಮಾಜ ಕಲ್ಯಾಣ ಇಲಾಖೆ ಮತ್ತು ತಾಲೂಕು ಆಡಳಿತದ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಬಯಲು ಶೌಚ ಮುಕ್ತ ಕರ್ನಾಟಕ ಎನ್ನುವ ಘೋಷಣೆಗಳ ನಡುವೆ, ಚಿರತೆ ಭಯದ ನಡುವೆ ಬಯಲಿಗೆ ಹೋಗುತ್ತಿರುವ ಈ ವಿದ್ಯಾರ್ಥಿನಿಯ ಮತ್ತು ಆ ಕುಟುಂಬದ ರಕ್ಷಣೆಗೆ ಆಡಳಿತ ವ್ಯವಸ್ಥೆ ಇಂದಾದರೂ ಮುಂದಾಗುವುದೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

Related Articles

Latest Articles