
ಐರ್ಲೆಂಡ್ನ ಡಬ್ಲಿನ್ನಲ್ಲಿ ಕಡಬ ಮೂಲದ ಸಾಂಜೋ ಸುನಿಲ್ (31) ಎಂಬ ಯುವಕ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಘಟನೆಯ ಹಿನ್ನೆಲೆ ಮತ್ತು ಪೊಲೀಸರ ತನಿಖೆಯ ಸಂಪೂರ್ಣ ವಿವರ ಇಲ್ಲಿದೆ.


ಕಡಬ: ಉದ್ಯೋಗಕ್ಕಾಗಿ ಐರ್ಲೆಂಡ್ಗೆ ತೆರಳಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಮೂಲದ ಯುವಕರೊಬ್ಬರು ತಮ್ಮ ನಿವಾಸದಲ್ಲೇ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಮೃತರನ್ನು ಕಡಬದ ಕುಟ್ರುಪಾಡಿ ವಿಮಲಗಿರಿ ನಿವಾಸಿ ಸಾಂಜೋ ಸುನಿಲ್ (31) ಎಂದು ಗುರುತಿಸಲಾಗಿದೆ. ಇವರು ಐರ್ಲೆಂಡ್ನ ಡಬ್ಲಿನ್ ನಗರದ ಫಿಂಗ್ಲಾಸ್ನ ಚಾರ್ಲ್ಸ್ಟೌನ್ ಪ್ರದೇಶದಲ್ಲಿ ವಾಸವಾಗಿದ್ದರು.
ಗುರುವಾರ ಸಾಂಜೋ ಸುನಿಲ್ ಅವರು ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಐರಿಶ್ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಇರಬಹುದು ಎಂದು ಶಂಕಿಸಲಾಗಿದ್ದರೂ, ಸಾವಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.


ಪೊಲೀಸರು ಇದನ್ನು ಸಂಶಯಾಸ್ಪದ ಸಾವು ಎಂದು ಪರಿಗಣಿಸಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಪತಿಯ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ಸಾಂಜೋ ಅವರ ಪತ್ನಿ ತೀವ್ರ ಆಘಾತಕ್ಕೊಳಗಾಗಿ ಅಸ್ವಸ್ಥಗೊಂಡಿರುವುದಾಗಿ ತಿಳಿದು ಬಂದಿದೆ.
ಕಡಬದಿಂದ ವಿದೇಶಕ್ಕೆ ತೆರಳಿ ಬದುಕು ಕಟ್ಟಿಕೊಳ್ಳುತ್ತಿದ್ದ ಯುವಕನ ಸಾವು ಇಡೀ ಕುಟುಂಬವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಪ್ರಸ್ತುತ ಐರಿಶ್ ಪೊಲೀಸರು ಮರಣೋತ್ತರ ಪರೀಕ್ಷೆ ಹಾಗೂ ಮುಂದಿನ ಕಾನೂನು ಪ್ರಕ್ರಿಯೆಗಳನ್ನು ನಡೆಸುತ್ತಿದ್ದಾರೆ. ಮೃತದೇಹವನ್ನು ಭಾರತಕ್ಕೆ ತರುವ ಕುರಿತು ಕುಟುಂಬಸ್ಥರು ಅಧಿಕಾರಿಗಳ ನೆರವು ಕೋರುವ ಸಾಧ್ಯತೆ ಇದೆ.ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
