Editorial: ಕಡಬದ ಮಲತ್ಯಾಜ್ಯ ಘಟಕ ವಿವಾದ – ಜನವಿರೋಧವೋ ಅಥವಾ ಆಡಳಿತದ ಇಚ್ಛಾಶಕ್ತಿಯ ಕೊರತೆಯೋ?

ಅಧಿಕಾರಿಗಳು ನೋಡಿದ ವೀಡಿಯೋಗಳನ್ನು ಗ್ರಾಮದ ಜನರಿಗೆ ಪ್ರಾತ್ಯಕ್ಷಿಕೆ ರೂಪದಲ್ಲಿ ತೋರಿಸಿ

kadaba times

ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಲತ್ಯಾಜ್ಯ ನಿರ್ವಹಣಾ ಘಟಕ (FSTP) ಯೋಜನೆಗೆ ಸಾರ್ವಜನಿಕರ ತೀವ್ರ ವಿರೋಧ ವ್ಯಕ್ತವಾಗಿದೆ. ಆಡಳಿತ ಮಂಡಳಿಯ ಸಂವಹನ ವೈಫಲ್ಯ, ಜನಪ್ರತಿನಿಧಿಗಳ ಗೊಂದಲ ಮತ್ತು ಇಚ್ಛಾಶಕ್ತಿಯ ಕೊರತೆಯೇ ಈ ವಿವಾದಕ್ಕೆ ಕಾರಣವೇ? ಈ ಕುರಿತಾದ ವಿಶೇಷ ಸಂಪಾದಕೀಯ ಲೇಖನ ಇಲ್ಲಿದೆ.

kadaba times
uniq

(ವಿ.ಕೆ ಕಡಬ , ಕಡಬ ಟೈಮ್ಸ್):   ಯಾವುದೇ ಒಂದು ಸಾರ್ವಜನಿಕ ಯೋಜನೆಯ ಯಶಸ್ಸು ಆ ಯೋಜನೆಯ ಹಿಂದಿರುವ ತಾಂತ್ರಿಕತೆಗಿಂತ ಹೆಚ್ಚಾಗಿ, ಆಡಳಿತ ಮಂಡಳಿಯು ಜನರೊಂದಿಗೆ ಹೊಂದಿರುವ ಪಾರದರ್ಶಕ ಸಂವಹನವನ್ನು ಅವಲಂಬಿಸಿರುತ್ತದೆ. ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಉದ್ದೇಶಿತ ಮಲತ್ಯಾಜ್ಯ ನಿರ್ವಹಣಾ ಘಟಕ (FSTP) ವಿವಾದಕ್ಕೆ ಈ ಮಾತು ಅಕ್ಷರಶಃ ಅನ್ವಯಿಸುತ್ತದೆ. ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಅತ್ಯಗತ್ಯವಾಗಿರುವ ಈ ಯೋಜನೆ ಇಂದು ಜನರ ಪ್ರತಿರೋಧದಿಂದಾಗಿ ಅತಂತ್ರ ಸ್ಥಿತಿಯಲ್ಲಿದೆ. ಆದರೆ, ಈ ವಿರೋಧಕ್ಕೆ ಜನರನ್ನು ಮಾತ್ರ ದೂರುವುದು ಎಷ್ಟು ಸರಿ?

ಅಧಿಕಾರಿಗಳಿಗೆ ಇರುವ ಮಾಹಿತಿ ಜನರಿಗೇಕಿಲ್ಲ?:  ಈ ಯೋಜನೆ ಕುರಿತು ಅದರ ನಿರ್ವಹಣೆ, ಅನುಷ್ಠಾನ ಮತ್ತು ಕಾರ್ಯವಿಧಾನದ ಬಗ್ಗೆ ಪಟ್ಟಣ ಪಂಚಾಯತ್ ಅಧಿಕಾರಿಗಳು ಪ್ರಾಯೋಗಿಕ ವೀಡಿಯೋಗಳನ್ನು ನೋಡಿ ಮಾಹಿತಿ ಪಡೆದಿದ್ದಾರೆ. ಆದರೆ, ಆ ಮಾಹಿತಿ ಅಧಿಕಾರಿಗಳ ಮೊಬೈಲ್ ಮತ್ತು ಕಡತಗಳಲ್ಲಿ ಮಾತ್ರ ಉಳಿದುಕೊಂಡಿದೆ. ಯೋಜನೆಯ ಫಲಾಫಲಗಳನ್ನು ಅನುಭವಿಸಬೇಕಾದ ಅಥವಾ ಅದರ ಸುತ್ತಮುತ್ತ ವಾಸಿಸಬೇಕಾದ ಗ್ರಾಮದ ಜನರಿಗೆ ಕನಿಷ್ಠ ಪಕ್ಷ ಮೂರು ಹಂತದ ಸಭೆಗಳನ್ನು ನಡೆಸಿ ಮನವರಿಕೆ ಮಾಡಿಕೊಡುವಲ್ಲಿ ಆಡಳಿತ ಮಂಡಳಿ ಸಂಪೂರ್ಣ ವಿಫಲವಾಗಿದೆ. ಯೋಜನೆಯ ಉದ್ದೇಶ, ಘಟಕ ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಇದರಿಂದ ಯಾವುದೇ ದುರ್ವಾಸನೆ ಅಥವಾ ಆರೋಗ್ಯ ಸಮಸ್ಯೆ ಉಂಟಾಗುವುದಿಲ್ಲ ಎಂಬ ಭರವಸೆಯನ್ನು ಜನರಲ್ಲಿ ಮೂಡಿಸಬೇಕಾದ್ದು ಆಡಳಿತದ ಪ್ರಥಮ ಆದ್ಯತೆಯಾಗಬೇಕಿತ್ತು.

ಆಡಳಿತ ಮಂಡಳಿಯಲ್ಲೇ ಸಮನ್ವಯದ ಕೊರತೆ:  ಇಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯ ಅಂಶವೆಂದರೆ ಆಡಳಿತ ಮಂಡಳಿಯೊಳಗಿನ ಭಿನ್ನಾಭಿಪ್ರಾಯ.  ಕಳಾರದಲ್ಲಿ ಜನರೊಂದಿಗೆ ಮಾತನಾಡಿದ  ಪಟ್ಟಣ ಪಂಚಾಯತ್ ಅಧ್ಯಕ್ಷರು ಆ ಒಂದು ಜಾಗವನ್ನು   ಪರ್ಯಾಯವಾಗಿ ಮನೆ ನಿರ್ಮಾಣಕ್ಕೆ ಬಳಸಲಾಗುವುದು ಎಂದು ಹೇಳುತ್ತಿದ್ದರೆ, ಇನ್ನೊಂದೆಡೆ ಸ್ಥಾಯಿ ಸಮಿತಿ ಅಧ್ಯಕ್ಷರು ವಿರೋಧಿಸುತ್ತಿರುವ ಜನರ ಪರವಾಗಿ ನಿಂತು “ನಾವಿದ್ದೇವೆ” ಎಂದು ಧೈರ್ಯ ತುಂಬುತ್ತಿದ್ದಾರೆ.  ಹೀಗೆ ಆಡಳಿತದ ಚುಕ್ಕಾಣಿ ಹಿಡಿದವರಲ್ಲೇ ಇಚ್ಛಾಶಕ್ತಿಯ ಕೊರತೆ ಮತ್ತು ಗೊಂದಲಗಳಿರುವಾಗ, ಸಾಮಾನ್ಯ ಜನರಲ್ಲಿ ಆತಂಕ ಮೂಡುವುದು ಸಹಜ. ಸ್ವತಃ ಆಡಳಿತ ಮಂಡಳಿಯೇ ಎರಡು ಧ್ರುವಗಳಂತೆ ವರ್ತಿಸುತ್ತಿರುವಾಗ, ಜನರನ್ನು ದೂರಿ ಪ್ರಯೋಜನವೇನು?

ಯೋಜನೆ ಎರಡು ವರ್ಷಗಳ ಹಿಂದೆ ಘೋಷಣೆಯಾದಾಗ ಮೌನವಾಗಿದ್ದ ಇಂಜಿನಿಯರ್‌ಗಳು, ಈಗ ಕಾಮಗಾರಿ ಆರಂಭವಾಗಿ ವಿರೋಧ ವ್ಯಕ್ತವಾದ ಮೇಲೆ ಮಾಧ್ಯಮಗಳ ಮುಂದೆ ಬರುತ್ತಿದ್ದಾರೆ. “ಇದು ವೈಜ್ಞಾನಿಕ ಯೋಜನೆ” ಎಂದು ಈಗ ಹೇಳುತ್ತಿರುವುದು ಜನರಲ್ಲಿ ನಂಬಿಕೆ ಹುಟ್ಟಿಸುವ ಬದಲಾಗಿ ಅನುಮಾನವನ್ನು ಹೆಚ್ಚಿಸುತ್ತಿದೆ. ಸರ್ಕಾರವು ದಂಡ ವಿಧಿಸುವ ಎಚ್ಚರಿಕೆ ನೀಡುವವರೆಗೆ ಕಾಯದೆ, ಮೊದಲೇ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರ ಜಂಟಿ ಸಭೆ ಕರೆದು ಅರಿವು ಮೂಡಿಸುವ ಕೆಲಸ ಆಗಬೇಕಿತ್ತು.

ಈಗಲಾದರೂ ಕಾಲ ಮಿಂಚಿಲ್ಲ. ಪಟ್ಟಣ ಪಂಚಾಯತ್ ಆಡಳಿತವು ಕೂಡಲೇ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬೇಕು:

kadaba times
kadaba times
  1. ಸಾರ್ವಜನಿಕ ಅರಿವು ಸಭೆ: ಗ್ರಾಮದ ಜನರಿಗೆ ಯೋಜನೆಯ ಪೂರ್ಣ ಮಾಹಿತಿ ನೀಡಲು ಕನಿಷ್ಠ ಮೂರು ಸಭೆಗಳನ್ನು ವಾರ್ಡ್ ಮಟ್ಟದಲ್ಲಿ ನಡೆಸಬೇಕು.

  2. ಪ್ರಾತ್ಯಕ್ಷಿಕೆ: ಅಧಿಕಾರಿಗಳು ತಾವು ನೋಡಿದ ವೀಡಿಯೋಗಳು ಮತ್ತು ದೇವನಹಳ್ಳಿಯಂತಹ ಯಶಸ್ವಿ ಮಾದರಿಗಳನ್ನು ಜನರಿಗೆ ತೋರಿಸಿ, ಇದರಲ್ಲಿ ಯಾವುದೇ ಅಪಾಯವಿಲ್ಲ ಎಂಬುದನ್ನು ಸಾಬೀತುಪಡಿಸಬೇಕು.

  3. ಏಕಪಕ್ಷೀಯ ನಿರ್ಧಾರ ಬಿಡಿ: ಆಡಳಿತ ಮಂಡಳಿ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರು ಒಂದೇ ವೇದಿಕೆಗೆ ಬಂದು ಒಮ್ಮತದ ನಿರ್ಧಾರ ತೆಗೆದುಕೊಳ್ಳಬೇಕು.

ಅಂತರ್ಜಲ ಉಳಿಸುವ ಮತ್ತು ಗ್ಲೋಬಲ್ ವಾರ್ಮಿಂಗ್ ತಡೆಯುವ ಈ ಯೋಜನೆ ಕಡಬಕ್ಕೆ ಅತ್ಯಗತ್ಯ. ಆದರೆ ಇದನ್ನು ಜನರ ಮೇಲೆ ಬಲವಂತವಾಗಿ ಹೇರುವುದಕ್ಕಿಂತ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಾರಿಗೆ ತರುವುದು ಜಾಣತನ. ಮನವರಿಕೆ ಮಾಡುವ ಹೊಣೆಗಾರಿಕೆ ಪಂಚಾಯತ್‌ನದ್ದೇ ಹೊರತು ಜನರದ್ದಲ್ಲ. ಆಡಳಿತ ಮಂಡಳಿ ಇಚ್ಛಾಶಕ್ತಿ ಪ್ರದರ್ಶಿಸಲಿ, ಜನರನ್ನು ಅಭಿವೃದ್ಧಿಯ ಪಾಲುದಾರರನ್ನಾಗಿ ಮಾಡಿಕೊಳ್ಳಲಿ.

Related Articles

Latest Articles