
ಮಂಗಳೂರಿನ ಮಣ್ಣಗುಡ್ಡದಲ್ಲಿ ನಡೆದ ರಸ್ತೆ ಅಪಘಾತದಲ್ಲಿ 19 ವರ್ಷದ ರಿಯಾ ಅಂಟನಿ ಸಾವಿಗೆ ಕಾರಣವಾದ ಕಾರು ಚಾಲಕ ದೀಪಕ್ಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿ ಮಂಗಳೂರು ನ್ಯಾಯಾಲಯ ಆದೇಶಿಸಿದೆ.


ಬೈಕ್ ಸವಾರಿಗೆ ಡಿಕ್ಕಿ ಹೊಡೆದು ಯುವತಿಯೊಬ್ಬಳ ಸಾವಿಗೆ ಕಾರಣವಾದ ಕಾರು ಚಾಲಕನಿಗೆ ಮಂಗಳೂರಿನ ಜೆಎಂಎಫ್ಸಿ 8ನೇ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ಘಟನೆಯ ಹಿನ್ನೆಲೆ: 2022ರ ಸೆಪ್ಟೆಂಬರ್ 3ರಂದು ಮಣ್ಣಗುಡ್ಡ ಸಮೀಪದ ಗಾಂಧಿನಗರ ಎಂಬಲ್ಲಿ ಈ ಅಪಘಾತ ಸಂಭವಿಸಿತ್ತು. ಆರೋಪಿ ದೀಪಕ್ ಆರ್. ಚಲಾಯಿಸುತ್ತಿದ್ದ ಕಾರು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ, ಬೈಕ್ ಸವಾರ ಆಕಾಶ್ ಅಜಯ್ ಗಾಯಗೊಂಡಿದ್ದರು. ಆದರೆ ಹಿಂಬದಿ ಕುಳಿತಿದ್ದ 19 ವರ್ಷದ ರಿಯಾ ಅಂಟನಿ ಗಂಭೀರವಾಗಿ ಗಾಯಗೊಂಡು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.


ನ್ಯಾಯಾಲಯದ ತೀರ್ಪು: ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಫವಾಝ್ ಪಿ.ಎ. ಅವರು ಆರೋಪಿ ದೀಪಕ್ ದೋಷಿ ಎಂದು ತೀರ್ಮಾನಿಸಿ, 6 ತಿಂಗಳು ಜೈಲು ಶಿಕ್ಷೆ ಮತ್ತು 7 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.
ಈ ಪ್ರಕರಣದ ತನಿಖೆಯನ್ನು ಅಂದಿನ ಸಂಚಾರ ಪಶ್ಚಿಮ ಪೊಲೀಸ್ ಠಾಣೆಯ ಎಸ್ಸೈ ಜಗನ್ನಾಥ್ ನಡೆಸಿದ್ದರು ಮತ್ತು ಇನ್ಸ್ಪೆಕ್ಟರ್ ಜಯಾನಂದ ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಗೀತಾ ರೈ ಮತ್ತು ಆರೋನ್ ಡಿಸೋಜ ವಿಟ್ಲ ವಾದ ಮಂಡಿಸಿದ್ದರು.
