
ವುಮೆನ್ಸ್ ಪ್ರೀಮಿಯರ್ ಲೀಗ್ 2026ರ 19ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 11 ರನ್ಗಳ ಭರ್ಜರಿ ಜಯ ಸಾಧಿಸಿದ ಗುಜರಾತ್ ಜೈಂಟ್ಸ್ ಪ್ಲೇ-ಆಫ್ಗೆ ಅರ್ಹತೆ ಪಡೆದಿದೆ. ಹರ್ಮನ್ಪ್ರೀತ್ ಕೌರ್ ಹೋರಾಟ ವ್ಯರ್ಥವಾಗಿದೆ.


ವುಮೆನ್ಸ್ ಪ್ರೀಮಿಯರ್ ಲೀಗ್ (WPL) 2026ರ ಆವೃತ್ತಿಯಲ್ಲಿ ಗುಜರಾತ್ ಜೈಂಟ್ಸ್ (GGTW) ಇತಿಹಾಸ ಬರೆದಿದೆ. ಬರೋಡಾದ ಬಿಎಸ್ಎ (BCA) ಕ್ರೀಡಾಂಗಣದಲ್ಲಿ ನಡೆದ 19ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ (MIW) ತಂಡವನ್ನು 11 ರನ್ಗಳಿಂದ ಸೋಲಿಸುವ ಮೂಲಕ ಗುಜರಾತ್ ಮೊದಲ ಬಾರಿಗೆ ಪ್ಲೇ-ಆಫ್ಗೆ ಪ್ರವೇಶ ಪಡೆದಿದೆ. ಈ ಗೆಲುವು ಗುಜರಾತ್ ಪಾಲಿಗೆ ವಿಶೇಷವಾಗಿದೆ, ಏಕೆಂದರೆ ಡಬ್ಲ್ಯೂಪಿಎಲ್ ಇತಿಹಾಸದಲ್ಲೇ ಮುಂಬೈ ವಿರುದ್ಧ ಜೈಂಟ್ಸ್ ಪಡೆಗೆ ಒಲಿದ ಮೊದಲ ಜಯ ಇದಾಗಿದೆ.
ಗುಜರಾತ್ ನೀಡಿದ್ದ 168 ರನ್ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಪವರ್ ಪ್ಲೇ ಅವಧಿಯಲ್ಲಿ ಕೇವಲ 33 ರನ್ಗಳಿಗೆ ಪ್ರಮುಖ 2 ವಿಕೆಟ್ ಕಳೆದುಕೊಂಡಿತು. ಹೇಲಿ ಮ್ಯಾಥ್ಯೂಸ್ (8) ಮತ್ತು ಸಜೀವನ್ ಸಜನಾ (26) ಬೇಗನೆ ಪೆವಿಲಿಯನ್ ಸೇರಿದರು. ಕಳೆದ ಪಂದ್ಯದ ಶತಕವೀರ ನ್ಯಾಟ್ ಸೀವರ್ ಬ್ರಂಟ್ ಕೇವಲ 2 ರನ್ ಗಳಿಸಿ ನಿರಾಸೆ ಮೂಡಿಸಿದರು.
ಮಧ್ಯಮ ಕ್ರಮಾಂಕದಲ್ಲಿ ನಾಯಕಿ ಹರ್ಮನ್ಪ್ರೀತ್ ಕೌರ್ ಬಿರುಸಿನ ಬ್ಯಾಟಿಂಗ್ ನಡೆಸಿ ತಂಡವನ್ನು ಗೆಲುವಿನ ಸಮೀಪಕ್ಕೆ ತಂದರು. ಕೌರ್ ಕೇವಲ 48 ಎಸೆತಗಳಲ್ಲಿ 8 ಬೌಂಡರಿ ಹಾಗೂ 4 ಸಿಕ್ಸರ್ಗಳ ನೆರವಿನಿಂದ ಅಜೇಯ 82 ರನ್ ಸಿಡಿಸಿದರು. ಆದರೆ, ಉಳಿದ ಆಟಗಾರ್ತಿಯರಿಂದ ಸೂಕ್ತ ಬೆಂಬಲ ಸಿಗದ ಕಾರಣ ಮುಂಬೈ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಲಷ್ಟೇ ಶಕ್ತವಾಯಿತು. ಕನ್ನಡಿಗ ರಾಜೇಶ್ವರಿ ಗಾಯಕ್ವಾಡ್ ಅಮನ್ ಜೋತ್ ಕೌರ್ ವಿಕೆಟ್ ಪಡೆಯುವ ಮೂಲಕ ಮುಂಬೈಗೆ ಕಡಿವಾಣ ಹಾಕಿದರು.
ಗುಜರಾತ್ ಇನ್ನಿಂಗ್ಸ್ ಹೈಲೈಟ್ಸ್:
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಗುಜರಾತ್ ಜೈಂಟ್ಸ್ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 167 ರನ್ ಕಲೆಹಾಕಿತು. ತಂಡದ ಪರ ನಾಯಕಿ ಆ್ಯಶ್ ಗಾರ್ಡ್ನರ್ (46 ರನ್, 28 ಎಸೆತ) ಮತ್ತು ಜಾರ್ಜಿಯಾ ವೇರಮ್ (46 ರನ್, 28 ಎಸೆತ) ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಸವಾಲಿನ ಮೊತ್ತಕ್ಕೆ ನಾಂದಿ ಹಾಡಿದರು. ಅನುಷ್ಕಾ ಶರ್ಮಾ 33 ರನ್ಗಳ ಉಪಯುಕ್ತ ಕೊಡುಗೆ ನೀಡಿದರು.
ಪ್ಲೇ-ಆಫ್ ಲೆಕ್ಕಾಚಾರ: ಮುಂಬೈ ಭವಿಷ್ಯ ಈಗ ದೆಹಲಿ ಕೈಯಲ್ಲಿ!
ಈ ಜಯದೊಂದಿಗೆ ಆರ್ಸಿಬಿ ನಂತರ ಪ್ಲೇ-ಆಫ್ ಪ್ರವೇಶಿಸಿದ ಎರಡನೇ ತಂಡವಾಗಿ ಗುಜರಾತ್ ಜೈಂಟ್ಸ್ ಹೊರಹೊಮ್ಮಿದೆ. ಇನ್ನುಳಿದ ಒಂದು ಸ್ಥಾನಕ್ಕಾಗಿ ಮೂರು ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.


-
ಡೆಲ್ಲಿ ಕ್ಯಾಪಿಟಲ್ಸ್: ನಾಳೆಯ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಗೆದ್ದರೆ ನೇರವಾಗಿ ಪ್ಲೇ-ಆಫ್ಗೇರಲಿದೆ.
-
ಮುಂಬೈ ಇಂಡಿಯನ್ಸ್: ದೆಹಲಿ ತಂಡ ಅಲ್ಪ ಅಂತರದಿಂದ ಸೋತರೆ, ಉತ್ತಮ ನೆಟ್ ರನ್ ರೇಟ್ (+0.059) ಹೊಂದಿರುವ ಮುಂಬೈ 3ನೇ ತಂಡವಾಗಿ ಪ್ಲೇ-ಆಫ್ ಪ್ರವೇಶಿಸಲಿದೆ.
-
ಯುಪಿ ವಾರಿಯರ್ಸ್: ಯುಪಿ ತಂಡವು ದೆಹಲಿ ವಿರುದ್ಧ ಬೃಹತ್ ಅಂತರದ ಜಯ ಸಾಧಿಸಿದರೆ ಮಾತ್ರ ಮುಂದಿನ ಹಂತಕ್ಕೆ ಹೋಗುವ ಅವಕಾಶ ಹೊಂದಿದೆ.
ಒಟ್ಟಾರೆಯಾಗಿ, ನಾಳೆ ನಡೆಯಲಿರುವ ದೆಹಲಿ ಮತ್ತು ಯುಪಿ ನಡುವಿನ ಪಂದ್ಯವು ಟೂರ್ನಿಯ ಮೂರನೇ ಪ್ಲೇ-ಆಫ್ ತಂಡವನ್ನು ನಿರ್ಧರಿಸಲಿದೆ.
