
ಕಡಬ ತಾಲೂಕು ಕಚೇರಿಯಲ್ಲಿ 77ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ತಹಸೀಲ್ದಾರ್ ಪ್ರಭಾಕರ ಖಜೂರೆ ಧ್ವಜಾರೋಹಣ ನೆರವೇರಿಸಿದರು. ಸಂವಿಧಾನದ ಮಹತ್ವದ ಕುರಿತು ಠಾಣಾಧಿಕಾರಿ ಜಂಬೂರಾಜ್ ಪ್ರಧಾನ ಭಾಷಣ ಮಾಡಿದರು. ಕಾರ್ಯಕ್ರಮದ ಪೂರ್ಣ ವಿವರ ಇಲ್ಲಿದೆ.


ಕಡಬ: “ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವು ನಮಗೆ ದಾರಿದೀಪವಾಗಿದೆ. ಅದರ ಆಶಯದಂತೆ ದೇಶದಲ್ಲಿ ಏಕತೆಯನ್ನು ಕಾಪಾಡಿಕೊಂಡು ಬರುವುದು ನಮ್ಮೆಲ್ಲರ ಆದ್ಯ ಕರ್ತವ್ಯ” ಎಂದು ಕಡಬ ತಹಸೀಲ್ದಾರ್ ಪ್ರಭಾಕರ ಖಜೂರೆ ಅವರು ಹೇಳಿದರು.
ಸೋಮವಾರ (ಜ. 26) ಕಡಬ ತಾಲೂಕು ಕಚೇರಿಯಲ್ಲಿ ನಡೆದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜವಂದನೆ ಸ್ವೀಕರಿಸಿ, ಬಳಿಕ ಸೈಂಟ್ ಆನ್ಸ್ ಶಾಲಾ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂವಿಧಾನ ಸರ್ವಕಾಲಿಕ – ಠಾಣಾಧಿಕಾರಿ ಜಂಬೂರಾಜ್: ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದ ಕಡಬ ಠಾಣಾಧಿಕಾರಿ ಜಂಬೂರಾಜ್ ಅವರು, “ಜಗತ್ತಿನ ಯಾವುದೇ ದೇಶದಲ್ಲಿ ಇಲ್ಲದ ಅತ್ಯಂತ ದೊಡ್ಡ ಮತ್ತು ಸದೃಢ ಸಂವಿಧಾನ ನಮ್ಮಲ್ಲಿದೆ. ಜಾತಿ, ಧರ್ಮ, ಬಡವ-ಬಲ್ಲಿದ ಎನ್ನುವ ಭೇದವಿಲ್ಲದೆ ಎಲ್ಲರಿಗೂ ಗೌರವ ನೀಡುವ ಈ ಸಂವಿಧಾನದಲ್ಲಿ 500ಕ್ಕೂ ಹೆಚ್ಚು ವಿಧಿಗಳಿದ್ದು (Articles), 120ಕ್ಕೂ ಅಧಿಕ ಬಾರಿ ತಿದ್ದುಪಡಿ ಕಂಡರೂ ಇಂದಿಗೂ ಶಕ್ತಿಯುತವಾಗಿದೆ. ಪಂಚಾಯತ್ನಿಂದ ರಾಷ್ಟ್ರ ರಾಜಕಾರಣದವರೆಗೆ ಆಡಳಿತವು ಸಂವಿಧಾನದ ಅಡಿಯಲ್ಲೇ ನಡೆಯಬೇಕು. ಸಾವಿರ ವರ್ಷವಾದರೂ ನಮ್ಮ ಸಂವಿಧಾನ ಸರ್ವಕಾಲಿಕವಾಗಿರುತ್ತದೆ,” ಎಂದು ತಿಳಿಸಿದರು.
ಗಣ್ಯರ ಉಪಸ್ಥಿತಿ: ಕಾರ್ಯಕ್ರಮವನ್ನು ಕಡಬ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಮನ್ನಾ ಜಬಿನ್ ಉದ್ಘಾಟಿಸಿದರು. ವೇದಿಕೆಯಲ್ಲಿ ಜಿ.ಪಂ. ಮಾಜಿ ಸದಸ್ಯ ಪಿ.ಪಿ. ವರ್ಗೀಸ್, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್, ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಂ. ಹನೀಫ್ ಮತ್ತು ಕಸಾಪ ತಾಲೂಕು ಘಟಕದ ಮಾಜಿ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು ಅವರು ಗಣರಾಜ್ಯೋತ್ಸವದ ಮಹತ್ವದ ಬಗ್ಗೆ ಮಾತನಾಡಿದರು.


ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲೀಲಾವತಿ ಇ., ಸದಸ್ಯರಾದ ಅಕ್ಷತಾ ಬಾಲಕೃಷ್ಣ, ರೋಹಿತ್ ಪಣೆಮಜಲು, ಮೋಹನ್, ದಯಾನಂದ ಪೊಯ್ಯೆತಡ್ಡ, ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ದೇವರಾಜ್, ಉಪ ಪ್ರಾಂಶುಪಾಲೆ ಡಾ. ವೇದಾವತಿ, ಸೈಂಟ್ ಆನ್ಸ್ ಶಾಲಾ ಮುಖ್ಯಸ್ಥ ಫಾ. ಸುನಿಲ್ ಪ್ರವೀಣ್ ಪಿಂಟೋ, ತಾಲೂಕು ಕಚೇರಿ ಶಿರಸ್ತೇದಾರ್ ಶಾಯದುಲ್ಲಾಖಾನ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಿವೃತ್ತ ಯೋಧ ಜೆ.ಪಿ.ಎಂ.ಚೆರಿಯನ್, ನಿವೃತ್ತ ಶಿಕ್ಷಕ ಶಿವರಾಮ ಗೌಡ ಕೋಡಿಂಬಾಳ, ನಿವೃತ್ತ ಪೊಲೀಸ್ ಅಧಿಕಾರಿ ದಾಮೋದರ ಕೆ., ಅಂಗನವಾಡಿ ಕಾರ್ಯಕರ್ತೆಯರಾದ ರೋಹಿಣಿ ಬಿಳಿನೆಲೆ, ಪಾರ್ವತಿ ನೆಲ್ಯಾಡಿ, ಆಶಾ ಕಾರ್ಯಕರ್ತೆ ಸುಚೇತ ಹಾಗೂ ಕ್ರೀಡಾ ಕ್ಷೇತ್ರದ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಡಬ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಗೂ ರೈತ ಗೀತೆ ಹಾಡಿದರು. ಉಪತಹಸೀಲ್ದಾರ್ ಗೋಪಾಲ್ ಕಲ್ಲುಗುಡ್ಡೆ ಸ್ವಾಗತಿಸಿದರು. ಹರೀಶ್ ಬೆದ್ರಾಜೆ ವಂದಿಸಿದರು. ಕಡಬ ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಶಿವಪ್ರಸಾದ್ ರೈ ಮೈಲೇರಿ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
