
ಕಡಬ ತಾಲ್ಲೂಕಿನ ಎಡಮಂಗಲದಲ್ಲಿ ಮನೆಯಂಗಳಕ್ಕೆ ನುಗ್ಗಿ ನಾಯಿ ಹೊತ್ತೊಯ್ದ ಚಿರತೆ ಸೆರೆಗೆ ಅರಣ್ಯ ಇಲಾಖೆ ಆದೇಶ ನೀಡಿದೆ. ಸ್ಥಳೀಯರಲ್ಲಿ ಮನೆಮಾಡಿದ ಆತಂಕ.ರದಿ ಸಲ್ಲಿಸುವಂತೆ ರಾಜ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಿಂದ ಸೂಚನೆ.


ಕಡಬ: ತಾಲೂಕಿನ ಎಡಮಂಗಲ ಗ್ರಾಮದ ನೂಚಿಲದಲ್ಲಿ ಚಿರತೆಯೊಂದು ಮನೆಯಂಗಳಕ್ಕೆ ನುಗ್ಗಿ ಸಾಕು ನಾಯಿಯನ್ನು ಹೊತ್ತೊಯ್ದ ಘಟನೆಗೆ ಸಂಬಂಧಿಸಿದಂತೆ, ರಾಜ್ಯ ಅರಣ್ಯ ಇಲಾಖೆಯು ತಕ್ಷಣದ ಕ್ರಮಕ್ಕೆ ಜಿಲ್ಲಾ ಅರಣ್ಯ ಇಲಾಖೆಗೆ ಸೂಚನೆ ನೀಡಿದೆ.
ಮನೆಯಂಗಳಕ್ಕೆ ನುಗ್ಗಿದ್ದ ಚಿರತೆ, ಸಾಕು ನಾಯಿಯನ್ನು ಹಿಡಿದು ಕೊಂಡೊಯ್ದ ಹಿನ್ನೆಲೆ ಎಡಮಂಗಲದ ಸಾಮಾಜಿಕ ಕಾರ್ಯಕರ್ತ ವಿನಯಚಂದ್ರ ಅವರು ನೀಡಿದ ದೂರು ಮತ್ತು ಪತ್ರಿಕಾ ವರದಿಗಳನ್ನು ಗಮನಿಸಿರುವ ಬೆಂಗಳೂರಿನ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯು, ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ (DCF) ತುರ್ತು ನಿರ್ದೇಶನ ನೀಡಿದೆ.


ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ನಿಯಮಾನುಸಾರ ಪರಿಶೀಲನೆ ನಡೆಸಲು ಮತ್ತು ಚಿರತೆ ಹಾವಳಿ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ಬಗ್ಗೆ ಸಮಗ್ರ ವರದಿಯನ್ನು ಸಲ್ಲಿಸುವಂತೆ ಮತ್ತು ಅವಶ್ಯಕತೆ ಇದ್ದಲ್ಲಿ ಪ್ರಸ್ತಾವನೆಗಳನ್ನು ಸಲ್ಲಿಸಲು ಇಲಾಖೆ ಆದೇಶಿಸಿದೆ.
ಗ್ರಾಮಸ್ಥರು ಚಿರತೆಯ ಹಾವಳಿಯಿಂದ ಮುಕ್ತಿ ಪಡೆಯಲು ಕಾಯುತ್ತಿದ್ದು, ಅರಣ್ಯ ಇಲಾಖೆಯ ಮುಂದಿನ ಕಾರ್ಯಾಚರಣೆಯ ಮೇಲೆ ಗ್ರಾಮಸ್ಥರು ಕಣ್ಣಿಟ್ಟಿದ್ದಾರೆ.
