
ಕಡಬದ ಸರಸ್ವತೀ ಸಮೂಹ ಸಂಸ್ಥೆಗಳಲ್ಲಿ 77ನೇ ಗಣರಾಜ್ಯೋತ್ಸವ ಹಾಗೂ ರಥ ಸಪ್ತಮಿ ಅಂಗವಾಗಿ ಸಾಮೂಹಿಕ ಸೂರ್ಯನಮಸ್ಕಾರ ಕಾರ್ಯಕ್ರಮ ನಡೆಯಿತು. ಗಣ್ಯರಿಂದ ದೇಶಭಕ್ತಿ ಹಾಗೂ ಆರೋಗ್ಯದ ಬಗ್ಗೆ ಸಂದೇಶ.


ಕಡಬ: ಇಲ್ಲಿನ ಸರಸ್ವತೀ ಸಮೂಹ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು. ಕಡಬ ಶ್ರೀ ಮಹಾಗಣಪತಿ ಫ್ಲವರ್ ಸ್ಟಾಲ್ನ ಮಾಲೀಕ ಪುಷ್ಪರಾಜ್ ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ರಥ ಸಪ್ತಮಿ ಅಂಗವಾಗಿ ವಿದ್ಯಾರ್ಥಿಗಳಿಂದ ಆಕರ್ಷಕ ಸಾಮೂಹಿಕ ಸೂರ್ಯನಮಸ್ಕಾರ ಪ್ರದರ್ಶನ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಂಜುನಾಥ ಮಾತನಾಡಿ, “ಮಕ್ಕಳಲ್ಲಿ ದೇಶಭಕ್ತಿ ಬೆಳೆಯಬೇಕು ಮತ್ತು ನಾಡಿನ ಸಂಸ್ಕೃತಿ-ಸಂಸ್ಕಾರವನ್ನು ಮೈಗೂಡಿಸಿಕೊಳ್ಳುವ ಮೂಲಕ ಸಮಾಜದ ಸೇವೆ ಮಾಡಬೇಕು” ಎಂದು ಕರೆ ನೀಡಿದರು.


ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹಕಾರ್ಯನಿರ್ವಹಣಾಧಿಕಾರಿ ವೆಂಕಟ್ರಮಣ ರಾವ್ ಮಂಕುಡೆ ಮಾತನಾಡಿ, ದೈನಂದಿನ ಜೀವನದಲ್ಲಿ ಯೋಗಾಸನದ ಮಹತ್ವ ಹಾಗೂ ಅದರಿಂದಾಗುವ ಆರೋಗ್ಯ ವೃದ್ಧಿಯ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯ ಅಧ್ಯಕ್ಷ ಸದಾಶಿವ ಭಟ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸಂವಿಧಾನದ ಆಶಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ವೇದಿಕೆಯಲ್ಲಿ ಅಜಿತ್ ರೈ ಆರ್ತಿಲ, ಶೈಲಶ್ರೀ ಎಸ್. ರೈ ಹಾಗೂ ವಸಂತ ಕರುಂಬೋಡಿ ಉಪಸ್ಥಿತರಿದ್ದರು. ವಸಂತ ಕರುಂಬೋಡಿ ಸ್ವಾಗತಿಸಿ, ಸೌಮ್ಯ ವಂದಿಸಿದರು. ಲಕ್ಷ್ಮೀಶ ಗೌಡ ಆರಿಗ ಮತ್ತು ಸುಮಂಗಳಾ ಎ. ಕಾರ್ಯಕ್ರಮ ನಿರೂಪಿಸಿದರು.
