ಕಡಬ ಪ.ಪಂ ಗೆ ಎಂ.ಎಲ್.ಸಿ ಕಿಶೋರ್ ಕುಮಾರ್ ಪುತ್ತೂರು ಭೇಟಿ: ಮೂಲಸೌಕರ್ಯಗಳ ಅಗತ್ಯತೆ ಬಗ್ಗೆ ಗಮನಕ್ಕೆ ತಂದ ಪ.ಪಂ ಅಧ್ಯಕ್ಷೆ

kadaba times

ಕರ್ನಾಟಕ ವಿಧಾನ ಪರಿಷತ್ ಶಾಸಕ ಕಿಶೋರ್ ಕುಮಾರ್ ಪುತ್ತೂರು ಅವರು ಕಡಬ ಪಟ್ಟಣ ಪಂಚಾಯಿತಿಗೆ ಭೇಟಿ ನೀಡಿದ್ದು, ಈ ವೇಳೆ ಪ.ಪಂ. ಅಧ್ಯಕ್ಷೆ ತಮನ್ನಾ ಜಬೀನ್ ಅವರು ಪಟ್ಟಣಕ್ಕೆ ಸಮಗ್ರ ಕುಡಿಯುವ ನೀರಿನ ಯೋಜನೆ, ಬಡವರಿಗೆ ನಿವೇಶನ ನೀಡಲು ಜಮೀನು ಮಂಜೂರಾತಿ, ಖಾಲಿ ಹುದ್ದೆಗಳ ಭರ್ತಿ ಸೇರಿದಂತೆ ಹಲವು ಮೂಲಭೂತ ಬೇಡಿಕೆಗಳನ್ನು ಶಾಸಕರ ಮುಂದಿಟ್ಟರು. ಸಭೆಯ ಬಳಿಕ ಶಾಸಕರು ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

kadaba times
uniq

ಕಡಬ: ಕಡಬ ಪಟ್ಟಣ ಪಂಚಾಯಿತಿಯ ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ ಮೂಲಸೌಕರ್ಯಗಳು, ಕುಡಿಯುವ ನೀರಿನ ಯೋಜನೆ, ನಿವೇಶನ ರಹಿತರಿಗೆ ಭೂಮಿ ಹಾಗೂ ಸಿಬ್ಬಂದಿ ಕೊರತೆ ನೀಗಿಸುವಂತೆ ಕೋರಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಮನ್ನಾ ಜಬೀನ್ ಅವರು ಕರ್ನಾಟಕ ವಿಧಾನ ಪರಿಷತ್ ಶಾಸಕ (MLC) ಕಿಶೋರ್ ಕುಮಾರ್ ಪುತ್ತೂರು ಅವರ ಗಮನಕ್ಕೆ ತಂದಿದ್ದಾರೆ.

ಕಡಬ ಪಟ್ಟಣ ಪಂಚಾಯಿತಿ ಕಾರ್ಯಾಲಯಕ್ಕೆ ಶಾಸಕ ಕಿಶೋರ್ ಕುಮಾರ್ ಪುತ್ತೂರು ಅವರು ಭೇಟಿ ನೀಡಿದ ಸಂದರ್ಭದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಕುರಿತು ವಿಸ್ತೃತ ಚರ್ಚೆ ನಡೆಯಿತು.

ಶಾಸಕರ ಮುಂದಿಟ್ಟ ಪ್ರಮುಖ ಬೇಡಿಕೆಗಳು: ಪಟ್ಟಣ ಪಂಚಾಯಿತಿ ವತಿಯಿಂದ ಶಾಸಕರಿಗೆ ಸಲ್ಲಿಸಲಾದ ಮನವಿಯಲ್ಲಿ ಪ್ರಮುಖವಾಗಿ ಕಡಬ ಪಟ್ಟಣ ವ್ಯಾಪ್ತಿಯ ಸಾರ್ವಜನಿಕರಿಗೆ ಶಾಶ್ವತ ಕುಡಿಯುವ ನೀರು ಒದಗಿಸಲು ಸಮಗ್ರ ಕುಡಿಯುವ ನೀರಿನ ಯೋಜನೆಯ ಮಂಜೂರಾತಿ, ವಸತಿ ರಹಿತರಿಗೆ ಹಾಗೂ ಬಡ ಕುಟುಂಬಗಳಿಗೆ ನಿವೇಶನ ವಿತರಿಸುವ ಉದ್ದೇಶದಿಂದ ಸರ್ಕಾರಿ ಜಮೀನು ಕಾಯ್ದಿರಿಸಿ ಮಂಜೂರು ಮಾಡುವುದು,  ಪಟ್ಟಣ ಪಂಚಾಯಿತಿಯಲ್ಲಿ ಖಾಲಿ ಇರುವ ವಿವಿಧ ಹಂತದ ಸಿಬ್ಬಂದಿ ಹಾಗೂ ಅಧಿಕಾರಿಗಳ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡುವುದು, ಪಟ್ಟಣದ ರಸ್ತೆ, ಚರಂಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡಿಸುವ ಬಗ್ಗೆ ಗಮನಕ್ಕೆ ತರಲಾಯಿತು.

ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ: ಸಭೆಯಲ್ಲಿ 15ನೇ ಹಣಕಾಸು ಆಯೋಗದ ಅನುದಾನ ಹಾಗೂ ರಾಜ್ಯ ಸರ್ಕಾರದ ಅಮೃತ ನಗರೋತ್ಥಾನ ಯೋಜನೆಯಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯ ಬಗ್ಗೆ ಅಧಿಕಾರಿಗಳು ಶಾಸಕರಿಗೆ ಮಾಹಿತಿ ನೀಡಿದರು.

kadaba times
kadaba times

ಸಭೆಯ ನಂತರ ಶಾಸಕ ಕಿಶೋರ್ ಕುಮಾರ್ ಪುತ್ತೂರು ಅವರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ ಖುದ್ದಾಗಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಘಟಕದ ದೈನಂದಿನ ಕಾರ್ಯನಿರ್ವಹಣೆ, ಹಸಿ-ಒಣ ಕಸ ವಿಂಗಡಣೆ, ಮನೆ-ಮನೆ ಕಸ ಸಂಗ್ರಹ ಹಾಗೂ ವೈಜ್ಞಾನಿಕ ವಿಲೇವಾರಿ ವ್ಯವಸ್ಥೆಯನ್ನು  ವೀಕ್ಷಣೆ ಮಾಡಿದರು

ಅಧಿಕಾರಿಗಳು-ಜನಪ್ರತಿನಿಧಿಗಳ ಸಮನ್ವಯಕ್ಕೆ ಶಾಸಕರ ಕಿವಿಮಾತು: ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕಿಶೋರ್ ಕುಮಾರ್, ಸರ್ಕಾರದ ಜನಪರ ಯೋಜನೆಗಳ ಸಂಪೂರ್ಣ ಸೌಲಭ್ಯವು ತಳಮಟ್ಟದ ಅರ್ಹ ಫಲಾನುಭವಿಗಳಿಗೆ ಸಕಾಲದಲ್ಲಿ ತಲುಪಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು. ಪಟ್ಟಣದ ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮಟ್ಟದಲ್ಲಿ ಪ್ರಸ್ತಾಪಿಸಿ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೀಲಾವತಿ ಇ., ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related Articles

Latest Articles