
ಕಡಬ:ಕಡಬದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ (ಎನ್ಎಸ್ಎಸ್) ಘಟಕದ ವತಿಯಿಂದ 25ನೇ ವರ್ಷದ ಬೆಳ್ಳಿಹಬ್ಬದ ಅಂಗವಾಗಿ 2026–2027ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವು ಅಕ್ಟೋಬರ್ 8 ರಿಂದ 14ರ ವರೆಗೆ ಕಾಲೇಜು ಆವರಣದಲ್ಲಿ ಆಯೋಜನೆಗೊಂಡಿದೆ. ಈ ಮಹತ್ವದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಡಬ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಮನ್ನಾ ಜಬೀನ್ ಅವರು ಕಾಲೇಜಿಗೆ ಭೇಟಿ ನೀಡಿ ಶಿಬಿರದ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿದರು.


ಸರ್ಕಾರಿ ಕಾಲೇಜು ಉಳಿಸಿ ಬೆಳೆಸುವುದು ಜನರ ಹೊಣೆ: ತಮನ್ನಾ ಜಬೀನ್
ಸಿದ್ಧತೆಗಳನ್ನು ವೀಕ್ಷಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅಧ್ಯಕ್ಷೆ ತಮನ್ನಾ ಜಬೀನ್ ಅವರು, “ಸರ್ಕಾರಿ ಕಾಲೇಜೊಂದು ಸತತ 25 ವರ್ಷಗಳ ಕಾಲ ಎನ್ಎಸ್ಎಸ್ನಂತಹ ಮಹತ್ವದ ಘಟಕವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಈ ಭಾಗದ ಸಾರ್ವಜನಿಕರು ತಮ್ಮ ಮಕ್ಕಳನ್ನು ಈ ಸರ್ಕಾರಿ ಕಾಲೇಜಿಗೆ ದಾಖಲಿಸುವ ಮೂಲಕ ಇಲ್ಲಿನ ಸುಸಜ್ಜಿತ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಕಾಲೇಜನ್ನು ಉಳಿಸಿ ಬೆಳೆಸಬೇಕು. ಕಾಲೇಜಿಗೆ ಅಗತ್ಯವಾಗಿರುವ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಯನ್ನು ಈಗಾಗಲೇ ಕಲ್ಪಿಸಲಾಗಿದ್ದು, ಈ ಬಾರಿಯ ಶಿಬಿರಕ್ಕೂ ಪಟ್ಟಣ ಪಂಚಾಯಿತಿ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು” ಎಂದು ಭರವಸೆ ನೀಡಿದರು.


ಈ ಸಂದರ್ಭದಲ್ಲಿ ಕಾಲೇಜಿನ ಹಿರಿಯ ಉಪನ್ಯಾಸಕ ವಾಸುದೇವ ಕೊಲ್ಪೆ, ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಸಲೀನ್ ಕೆ.ಪಿ., ಸಹ ಕಾರ್ಯಕ್ರಮಾಧಿಕಾರಿ ಲಾವಣ್ಯ ಹಾಗೂ ಉಪನ್ಯಾಸಕ ಕಬೀರ್ ಉಪಸ್ಥಿತರಿದ್ದರು.
ನಾಳೆ ಶಾಸಕಿ ಭಾಗೀರಥಿ ಮುರುಳ್ಯ ಅವರಿಂದ ಚಾಲನೆ:‘ನಶಾ ಮುಕ್ತ ಭಾರತ’ ಎಂಬ ಧ್ಯೇಯವಾಕ್ಯದೊಂದಿಗೆ ರೂಪಿಸಲಾಗಿರುವ ಈ ಸಪ್ತಾಹದ ಶಿಬಿರವನ್ನು ಅಕ್ಟೋಬರ್ 8ರ ಗುರುವಾರ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ ಅವರು ವಿದ್ಯುಕ್ತವಾಗಿ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಿ. ದೇವರಾಜು ವಹಿಸಲಿದ್ದಾರೆ.
