
ಕಡಬ:“ನಾವು ಸಮಾಜಕ್ಕೆ ನೀಡುವ ಅತ್ಯಂತ ಸಣ್ಣ ಸಹಾಯವೂ ಪ್ರತಿಯೊಬ್ಬರ ಜೀವನದಲ್ಲಿ ಮಹತ್ತರ ಬದಲಾವಣೆಯನ್ನು ತರಬಲ್ಲದು. ಸ್ವಯಂಸೇವೆಯ ಮೂಲಕ ವಿದ್ಯಾರ್ಥಿಗಳು ದೇಶದ ಸರ್ವಾಂಗೀಣ ಪ್ರಗತಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು” ಎಂದು ಕಡಬ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಮನ್ನಾ ಜಬೀನ್ ಕರೆ ನೀಡಿದ್ದಾರೆ.


ಕಡಬ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ (ಎನ್ಎಸ್ಎಸ್) ಘಟಕದ 25ನೇ ವರ್ಷದ ಬೆಳ್ಳಿಹಬ್ಬದ ಅಂಗವಾಗಿ ಆಯೋಜಿಸಲಾಗಿರುವ ವಾರ್ಷಿಕ ವಿಶೇಷ ಶಿಬಿರದ ಭಾಗವಾಗಿ ನಡೆದ ಉದ್ಘಾಟನೆ ಕಾರ್ಯಕ್ರಮದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಿದ ಕೃಷ್ಣ ಶೆಟ್ಟಿಯವರಿಗೆ ಸನ್ಮಾನ: ಕಾಲೇಜಿನ ಸರ್ವತೋಮುಖ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿರುವ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿ ಅವರನ್ನು ಈ ಸಂದರ್ಭದಲ್ಲಿ ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಕಡಬ ಕಾಲೇಜು ಅಭಿವೃದ್ಧಿ ಸಮಿತಿಯ (ಸಿಡಿಸಿ) ಅಧ್ಯಕ್ಷರಾಗಿ ಸುದೀರ್ಘ 20 ವರ್ಷಗಳ ಕಾಲ ನಿಸ್ವಾರ್ಥ ಸೇವೆ ಸಲ್ಲಿಸಿ, ಸಂಸ್ಥೆಯ ಮೂಲಸೌಕರ್ಯ ಹಾಗೂ ಶೈಕ್ಷಣಿಕ ವಾತಾವರಣವನ್ನು ರೂಪಿಸುವಲ್ಲಿ ಅವರು ವಹಿಸಿದ ಪಾತ್ರವನ್ನು ಸ್ಮರಿಸಿ ಗೌರವ ನಮನ ಸಲ್ಲಿಸಲಾಯಿತು.


ಕಾಯಕವೇ ಕೈಲಾಸ – ಶಿಬಿರಾರ್ಥಿಗಳಿಂದ ಶ್ರಮದಾನ: ‘ನಶಾ ಮುಕ್ತ ಭಾರತ ಅಭಿಯಾನ’ ಎಂಬ ಧ್ಯೇಯವಾಕ್ಯದೊಂದಿಗೆ ನಡೆಯುತ್ತಿರುವ ಈ ಬಾರಿಯ ಶಿಬಿರದಲ್ಲಿ ಇಂದು ವಿದ್ಯಾರ್ಥಿ-ಸ್ವಯಂಸೇವಕರು ಶ್ರಮದಾನದಲ್ಲಿ ಭಾಗಿಯಾದರು. ಕೈಯಲ್ಲಿ ಹಾರೆ, ಸಲಿಕೆ ಹಿಡಿದು ಸಂಘಟಿತವಾಗಿ ಬೆವರು ಸುರಿಸಿದ ಯುವಪಡೆ, ನಿಸ್ವಾರ್ಥ ಶ್ರಮದಾನದ ಮೂಲಕ ಶ್ರಮದ ಗೌರವವನ್ನು ಎತ್ತಿಹಿಡಿದಿದ್ದಾರೆ . ಪರಿಸರ ನೈರ್ಮಲ್ಯೀಕರಣದ ಕಾರ್ಯಗಳನ್ನು ಶಿಬಿರಾರ್ಥಿಗಳು ಅತ್ಯಂತ ಉತ್ಸಾಹದಿಂದ ನಿರ್ವಹಿಸುತ್ತಿದ್ದಾರೆ .
ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಕಡಬ ಕಾಲೇಜಿನ ಎನ್ಎಸ್ಎಸ್ ಘಟಕವು ವಿದ್ಯಾರ್ಥಿಗಳಲ್ಲಿ ಕಾಯಕ ಸಂಸ್ಕೃತಿ ಮತ್ತು ರಾಷ್ಟ್ರಪ್ರೇಮವನ್ನು ಬಿತ್ತುವ ಮೂಲಕ ಇಡೀ ಊರಿಗೆ ಮಾದರಿಯಾಗಿದೆ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಿ. ದೇವರಾಜು, ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಕಾಲೇಜು ಅಭಿವೃದ್ಧಿ ಸಮಿತಿ ಹಾಗೂ ಬೆಳ್ಳಿಹಬ್ಬ ಆಚರಣಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
