ಹೋಟೆಲ್‌ನಲ್ಲಿ ಮಲಗಿದ್ದ ಕಾಣಿಯೂರಿನ ವ್ಯಕ್ತಿ ಅಸ್ವಸ್ಥಗೊಂಡು ಮೃತ್ಯು

kadaba times

 ಕಾಣಿಯೂರು ಗ್ರಾಮದ ಬಾರೆತ್ತಡಿ ನಿವಾಸಿ, ಬಾಳಿಲ ಗ್ರಾಮದ ನಿಂತಿಕಲ್ಲುನಲ್ಲಿ ಸ್ವಂತ ಹೋಟೆಲ್ ನಡೆಸುತ್ತಿದ್ದ ನವೀಶ್ (38) ಎಂಬವರು ಹೋಟೆಲ್‌ನಲ್ಲಿ ಮಲಗಿದ್ದ ವೇಳೆ ಅಸ್ವಸ್ಥಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಹೃದಯಾಘಾತದಿಂದ ಈ ಸಾವು ಸಂಭವಿಸಿರಬಹುದೆಂದು ಶಂಕಿಸಲಾಗಿದ್ದು, ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು (UDR) ಪ್ರಕರಣ ದಾಖಲಾಗಿದೆ.

kadaba times

ಬೆಳ್ಳಾರೆ / ನಿಂತಿಕಲ್ಲು: ಬಾಳಿಲ ಗ್ರಾಮದ ನಿಂತಿಕಲ್ಲು ಎಂಬಲ್ಲಿ ಸ್ವಂತ ಹೋಟೆಲ್ ವ್ಯವಹಾರ ಮಾಡಿಕೊಂಡಿದ್ದ ಕಡಬ ತಾಲೂಕಿನ ಕಾಣಿಯೂರು ಗ್ರಾಮದ ಯುವಕನೋರ್ವ ಹೋಟೆಲ್‌ನಲ್ಲಿ ಮಲಗಿದ್ದ ವೇಳೆಯಲ್ಲೇ ಅಸ್ವಸ್ಥಗೊಂಡು ಕೊನೆಯುಸಿರೆಳೆದಿರುವ ದುರದೃಷ್ಟಕರ ಘಟನೆ ಸಂಭವಿಸಿದೆ.

ಮೃತರನ್ನು ಕಾಣಿಯೂರು ಗ್ರಾಮದ ಬಾರೆತ್ತಡಿ ಮನೆ ನಿವಾಸಿ ನವೀಶ್ (38) ಎಂದು ಗುರುತಿಸಲಾಗಿದೆ. ಇವರು ಕಳೆದ 10 ತಿಂಗಳುಗಳಿಂದ ನಿಂತಿಕಲ್ಲುನಲ್ಲಿ ಸ್ವಂತ ಹೋಟೆಲ್ ಆರಂಭಿಸಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದರು.

ತಡರಾತ್ರಿ ಕರೆ ಮಾಡಿ ಹುಷಾರಿಲ್ಲವೆಂದಿದ್ದ ನವೀಶ್: ಪೊಲೀಸರಿಗೆ ಲಭ್ಯವಾದ ದೂರಿನ ಮಾಹಿತಿಯ ಪ್ರಕಾರ, ನವೀಶ್ ಅವರು ಅಕ್ಟೋಬರ್ 15ರಂದು ರಾತ್ರಿ 8 ಗಂಟೆಯ ಸುಮಾರಿಗೆ ವ್ಯಾಪಾರ ಮುಗಿಸಿ ಹೋಟೆಲ್‌ನ ಬಾಗಿಲು ಮುಚ್ಚಿ ಅಲ್ಲೇ ಮಲಗಿದ್ದರು. ಅಕ್ಟೋಬರ್ 16ರ ಬೆಳಗಿನ ಜಾವ ಸುಮಾರು 2:30ರ ವೇಳೆಗೆ ನವೀಶ್ ತಮ್ಮ ಸಹೋದರ ಭರತ್ ಅವರಿಗೆ ದೂರವಾಣಿ ಕರೆ ಮಾಡಿ, “ನನಗೆ ಮೈ ಹುಷಾರಿಲ್ಲ” ಎಂದು ತಿಳಿಸಿದ್ದರು.

uniq
kadaba times

ಕೂಡಲೇ ಸಹೋದರರಾದ ಪ್ರಶಾಂತ್ ಮತ್ತು ಭರತ್ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ನವೀಶ್ ಹೋಟೆಲ್‌ನ ಚಾಪೆಯ ಮೇಲೆ ಮಲಗಿದ್ದರು. ಬಳಿಕ ಮುಂಜಾನೆ 6:30ರ ಸುಮಾರಿಗೆ ಪುನಃ ಹೋಟೆಲ್‌ಗೆ ತೆರಳಿ ನೋಡಿದಾಗ ನವೀಶ್ ಅವರು ಮಲಗಿದ ಸ್ಥಳದಲ್ಲೇ ತೀವ್ರ ಅಸ್ವಸ್ಥರಾಗಿ ನರಳಾಡುತ್ತಿರುವುದು ಕಂಡುಬಂದಿದೆ.

ಬೆಳ್ಳಾರೆ ಠಾಣೆಯಲ್ಲಿ ಕೇಸ್: ಸ್ಥಿತಿಯನ್ನು ಗಮನಿಸಿದ ತಕ್ಷಣವೇ ಕುಟುಂಬಸ್ಥರು 108 ಆಂಬ್ಯುಲೆನ್ಸ್ ಮೂಲಕ ಸುಳ್ಯ ಸರ್ಕಾರಿ ಆಸ್ಪತ್ರೆಗೆ ನವೀಶ್ ಅವರನ್ನು ಸಾಗಿಸಿದರು. ಆದರೆ, ಪರೀಕ್ಷೆ ನಡೆಸಿದ ವೈದ್ಯರು ಬೆಳಿಗ್ಗೆ 7:40ರ ವೇಳೆಗೆ ನವೀಶ್ ಅವರು ಅದಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಪ್ರಾಥಮಿಕವಾಗಿ ಹೃದಯಾಘಾತದಿಂದಲೇ ಸಾವು ಸಂಭವಿಸಿರಬಹುದೆಂದು ಶಂಕಿಸಲಾಗಿದೆ.

ಮೃತರು ಅವಿವಾಹಿತರಾಗಿದ್ದು, ತಾಯಿ ಪುಷ್ಪಾವತಿ, ಸಹೋದರರಾದ ಪ್ರಶಾಂತ್ ಹಾಗೂ ಭರತ್, ಸಹೋದರಿ ವೀಣಾ ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೃತರ ಸಹೋದರ ಪ್ರಶಾಂತ್ (30) ನೀಡಿದ ದೂರಿನ ಮೇರೆಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು (UDR) ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Related Articles

Latest Articles