
ರಾಮಕುಂಜ / ಕಡಬ: ಕಡಬ ತಾಲೂಕಿನ ಕೊಯಿಲ ಗ್ರಾಮದ ಆನೆಗುಂಡಿ ಎಂಬಲ್ಲಿ ಮನೆಯ ಪಕ್ಕದ ಬಾವಿಯಿಂದ ನೀರು ಸೇದುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೋರ್ವರು ಆಕಸ್ಮಿಕವಾಗಿ ಕಾಲುಜಾರಿ ಆಳದ ಬಾವಿಗೆ ಬಿದ್ದು ಮೃತಪಟ್ಟಿರುವ ಮನಕಲಕುವ ಘಟನೆ ಅಕ್ಟೋಬರ್ 17ರಂದು ನಡೆದಿದೆ.


ಕೊಯಿಲ ಗ್ರಾಮದ ಆನೆಗುಂಡಿ ನಿವಾಸಿ ಡೊಂಬಯ್ಯ ಮುಗೇರ (50) ಮೃತಪಟ್ಟ ದುರ್ದೈವಿಯಾಗಿದ್ದಾರೆ.
ನೀರು ಸೇದುವಾಗ ಸಂಭವಿಸಿದ ಅವಘಡ: ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಡೊಂಬಯ್ಯ ಮುಗೇರ ಅವರು ಅಕ್ಟೋಬರ್ 17ರಂದು ಬೆಳಿಗ್ಗೆ ಸುಮಾರು 10:30ರ ವೇಳೆಗೆ ಮನೆಯ ಪಕ್ಕದಲ್ಲೇ ಇರುವ ಬಾವಿಯಿಂದ ನೀರು ಸೇದಲು ತೆರಳಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಲುಜಾರಿ ಅವರು ಬಾವಿಯೊಳಗೆ ಬಿದ್ದಿದ್ದಾರೆ.


ಅವರು ಬಾವಿಗೆ ಬಿದ್ದ ತಕ್ಷಣ ಮನೆಯವರು ಗಾಬರಿಗೊಂಡು ಅಗ್ನಿಶಾಮಕ ದಳಕ್ಕೆ ತುರ್ತು ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಊರಿನ ಸಾರ್ವಜನಿಕರ ಸಹಕಾರದಿಂದ ರಕ್ಷಣಾ ಕಾರ್ಯಾಚರಣೆ ನಡೆಸಿ, ಬೆಳಿಗ್ಗೆ 11:45ರ ವೇಳೆಗೆ ಡೊಂಬಯ್ಯ ಅವರನ್ನು ಬಾವಿಯಿಂದ ಮೇಲಕ್ಕೆತ್ತಲಾಯಿತು. ಆದರೆ, ಆ ವೇಳೆಗಾಗಲೇ ಅವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.
ಕಡಬ ಠಾಣೆಯಲ್ಲಿ ಪ್ರಕರಣ ದಾಖಲು:ದುರ್ಘಟನೆಯ ಕುರಿತು ಮೃತರ ಪುತ್ರ ಸುಜಿತ್ಕುಮಾರ್ ಅವರು ನೀಡಿದ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳ ಮಹಜರು ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
