
ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ಘೋಷಿಸಿದ ಹಿನ್ನೆಲೆಯಲ್ಲಿ ಕಡಬ ಹಾಗೂ ಕಲ್ಲುಗುಡ್ಡೆ ಪೇಟೆಗಳಲ್ಲಿ ವಿವಿಧ ತುಳು ಸಂಘಟನೆಗಳು ಹಾಗೂ ಯುವಕ ಮಂಡಲಗಳ ವತಿಯಿಂದ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ನಡೆಸಲಾಯಿತು.


ಕಡಬ / ಕಲ್ಲುಗುಡ್ಡೆ:ಕರಾವಳಿ ತುಳುವರ ದಶಕಗಳ ಕನಸು ಹಾಗೂ ನಿರಂತರ ಹೋರಾಟಕ್ಕೆ ಕೊನೆಗೂ ಐತಿಹಾಸಿಕ ಫಲ ಸಿಕ್ಕಿದ್ದು, ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆ ಸ್ಥಾನಮಾನ ನೀಡುವ ಮಹತ್ವದ ಘೋಷಣೆ ಹೊರಬೀಳುತ್ತಿದ್ದಂತೆ ಕಡಬ ತಾಲೂಕಿನಾದ್ಯಂತ ಸಂಭ್ರಮದ ವಾತಾವರಣ ಮನೆಮಾಡಿದೆ.

ಈ ಐತಿಹಾಸಿಕ ತೀರ್ಮಾನವನ್ನು ಸ್ವಾಗತಿಸಿ ಕಡಬ ಪೇಟೆ ಹಾಗೂ ಕಲ್ಲುಗುಡ್ಡೆ ಪೇಟೆಗಳಲ್ಲಿ ತುಳು ಪರ ಸಂಘಟನೆವಿಜಯೋತ್ಸವ ಆಚರಿಸಿದೆ.
ಕಡಬ, ಕಲ್ಲುಗುಡ್ಡೆಯಲ್ಲಿ ಸಿಹಿ ಹಂಚಿ ವಿಜಯೋತ್ಸವ:‘ತುಳುನಾಡ ತುಡರ್ ಯುವಕ ಮಂಡಲ ನೂಜಿಬೈಲ್’, ‘ತೆಗ್ರ್ ತುಳುಕೂಟ ನೂಜಿಬೈಲ್’ ಹಾಗೂ ‘ವಿಶ್ವ ತುಳುವೆರ್ ಕಡಬ ಘಟಕ’ದ ಸಂಯುಕ್ತ ಆಶ್ರಯದಲ್ಲಿ ಸಾರ್ವಜನಿಕರಿಗೆ ಸಿಹಿ ವಿತರಿಸಿ, ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಲಾಯಿತು.


ತುಳುನಾಡ ತುಡರ್ ಯುವಕ ಮಂಡಲದ ಗೌರವ ಅಧ್ಯಕ್ಷ ಉಮೇಶ್ ಶೆಟ್ಟಿ ಸಾಯಿರಾಮ್ ಅವರ ನೇತೃತ್ವದಲ್ಲಿ ಈ ಸಂಭ್ರಮಾಚರಣಾ ಕಾರ್ಯಕ್ರಮ ನಡೆಯಿತು.
ತುಳುವರ ಹೋರಾಟಕ್ಕೆ ಸಂದ ಜಯ:ಕಾರ್ಯಕ್ರಮದಲ್ಲಿ ಮುಖಂಡರು ಮಾತನಾಡಿ, ತುಳು ಭಾಷೆಗೆ ಸೂಕ್ತ ಮನ್ನಣೆ ನೀಡಬೇಕೆಂಬುದು ಕರಾವಳಿ ಜನರ ಬಹುಕಾಲದ ಹಕ್ಕೊತ್ತಾಯವಾಗಿತ್ತು. ಮಂಗಳೂರಿನಲ್ಲೇ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಐತಿಹಾಸಿಕ ನಿರ್ಧಾರ ಪ್ರಕಟಗೊಂಡಿರುವುದು ಸಮಸ್ತ ತುಳುವರಿಗೆ ಹೆಮ್ಮೆಯ ಕ್ಷಣವಾಗಿದೆ ಎಂದು ಸಂತಸ ಹಂಚಿಕೊಂಡರು.
ಸಂಭ್ರಮಾಚರಣೆಯಲ್ಲಿ ಯುವಕ ಮಂಡಲದ ಅಧ್ಯಕ್ಷ ತಿರುಮಲೇಶ್ವರ ಸಾಕೋಟೆ ,ಕ್ರೀಡಾ ಕಾರ್ಯದರ್ಶಿ ಯಶವಂತ ಕಲ್ಲುಗುಡ್ಡೆ,ಪ್ರಮುಖರಾದ ಕಿಟ್ಟು ಕಲ್ಲುಗುಡ್ಡೆ, ಚಂದ್ರಶೇಖರ ಗೌಡ ಹಳೆನೂಜಿ, ಪ್ರಮೋದ್ ಇಚಿಲಡ್ಕ ಹಾಗೂ ಯುವಕ ಮಂಡಲದ ಪದಾಧಿಕಾರಿಗಳು, ಸದಸ್ಯರು, ವರ್ತಕರು ಮತ್ತು ಸ್ಥಳೀಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.
