
ಕುಂತೂರು ಗ್ರಾಮದ ಎರ್ಮಾಳ ಅರಣ್ಯ ಪ್ರದೇಶದಲ್ಲಿ ಪೆರಾಬೆ ಗ್ರಾಮದ ಕೊಡಿಯಡ್ಕ ನಿವಾಸಿ ಶೇಖರ್ ಕೆ. (44) ಎಂಬವರು ಮರವೊಂದಕ್ಕೆ ಬೈರಸ್ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹ ಹಾಗೂ ಪತ್ನಿ ಜತೆಗಿನ ಜಗಳದಿಂದ ಮನನೊಂದು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದ್ದು, ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕಡಬ:ಪತ್ನಿಯ ಜತೆಗಿನ ಕೌಟುಂಬಿಕ ಕಲಹದಿಂದ ಮನನೊಂದ ವ್ಯಕ್ತಿಯೊಬ್ಬರು ‘ನಾನು ನಿಮಗೆ ಇನ್ನು ಮುಂದೆ ಸಿಗುವುದಿಲ್ಲ’ ಎಂದು ಅಣ್ಣನಿಗೆ ಫೋನ್ನಲ್ಲಿ ಹೇಳಿ, ಕುಂತೂರು ಗ್ರಾಮದ ಎರ್ಮಾಳ ಅರಣ್ಯ ಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಭವಿಸಿದೆ.
ಕಡಬ ತಾಲೂಕಿನ ಪೆರಾಬೆ ಗ್ರಾಮದ ಕೊಡಿಯಡ್ಕ ಮನೆ ನಿವಾಸಿ ದಿ. ಕುಂಞಣ್ಣ ಗೌಡ ಅವರ ಪುತ್ರ ಶೇಖರ್ ಕೆ. (44) ಮೃತಪಟ್ಟ ವ್ಯಕ್ತಿ. ಇವರು ಶಾಲಾ ಬಸ್ ಚಾಲಕರಾಗಿ ಹಾಗೂ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ದೈವದ ಕಾರ್ಯಕ್ಕೆ ಬಂದಿದ್ದ ಅಣ್ಣ – ರಾಜಿ ಪಂಚಾಯಿತಿ ಯತ್ನ: ಶೇಖರ್ ಅವರ ಅಣ್ಣ ಗಂಗಾಧರ (48) ಕುಟುಂಬ ಸಮೇತ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಸೆಪ್ಟೆಂಬರ್ 17 ರಂದು ಪೆರಾಬೆಯ ಸ್ವಗೃಹದಲ್ಲಿ ನಡೆದ ದೈವದ ಸಂಕ್ರಾಂತಿ ಪೂಜಾ ಕಾರ್ಯಕ್ರಮಕ್ಕಾಗಿ ಊರಿಗೆ ಬಂದಿದ್ದರು. ಶೇಖರ್ ಹಾಗೂ ಆತನ ಪತ್ನಿ ನಡುವೆ ಪರಸ್ಪರ ವೈಮನಸ್ಸು ಉಂಟಾಗಿ ಸರಿಯಾಗಿ ಮಾತನಾಡುತ್ತಿರಲಿಲ್ಲ. ಪೂಜೆ ಮುಗಿದ ನಂತರ ದಂಪತಿಯನ್ನು ಕೂರಿಸಿ ರಾಜಿ ಮಾಡಿ ಜಗಳ ಬಗೆಹರಿಸಲು ಕುಟುಂಬಸ್ಥರು ನಿರ್ಧರಿಸಿದ್ದರು. ಆದರೆ ಶೇಖರ್ ಕಾರಣಾಂತರಗಳಿಂದ ಯಾರಿಗೂ ಸಿಗದೆ ತಪ್ಪಿಸಿಕೊಳ್ಳುತ್ತಿದ್ದರು.
ಸೆಪ್ಟೆಂಬರ್ 17 ರಂದು ಮಧ್ಯಾಹ್ನ ಶಾಲಾ ಬಸ್ನಲ್ಲಿ ತೆರಳಿದ್ದ ಶೇಖರ್, ಸಂಜೆ 6 ಗಂಟೆಗೆ ಅಣ್ಣ ಕರೆ ಮಾಡಿದಾಗ ಸುರುಳಿ ಸುಬ್ರಹ್ಮಣ್ಯ ದೇವಸ್ಥಾನದ ಭಜನಾ ಕಾರ್ಯಕ್ರಮದಲ್ಲಿದ್ದು, ರಾತ್ರಿ 10 ಗಂಟೆಗೆ ಮನೆಗೆ ಬರುವುದಾಗಿ ತಿಳಿಸಿದ್ದರು.
‘ನಾನು ಇನ್ನು ಸಿಗಲ್ಲ’ ಎಂದಿದ್ದೇ ಕೊನೆ ಕರೆ: ರಾತ್ರಿ ವೇಳೆ ಅಣ್ಣ ಗಂಗಾಧರ ಹಾಗೂ ಮತ್ತೊಬ್ಬ ತಮ್ಮ ಉಮೇಶ್ ಎರ್ಮಾಳದಲ್ಲಿರುವ ಅಕ್ಕನ ಮನೆಗೆ ತೆರಳುತ್ತಿದ್ದಾಗ, ರಸ್ತೆ ಬದಿಯಲ್ಲಿ ಶೇಖರ್ ಅವರ ಬೈಕ್ ನಿಂತಿರುವುದು ಕಂಡುಬಂದಿದೆ. ಅಕ್ಕನ ಮನೆಗೆ ಹೋಗಿ ವಿಚಾರಿಸಿದಾಗ ಆತ ಅಲ್ಲಿಗೂ ಬಂದಿರಲಿಲ್ಲ.


ತಕ್ಷಣ ಶೇಖರ್ಗೆ ದೂರವಾಣಿ ಕರೆ ಮಾಡಿದಾಗ, “ನಾನು ನಿಮಗೆ ಇನ್ನು ಮುಂದೆ ಸಿಗುವುದಿಲ್ಲ” ಎಂದು ಆತ ಹೇಳಿ ಕರೆ ಕಟ್ ಮಾಡಿದ್ದಾನೆ. ನಂತರ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಆತಂಕಗೊಂಡ ಸಹೋದರರು ಹಾಗೂ ನೆರೆಹೊರೆಯವರು ರಾತ್ರಿಯಿಡೀ ಸುತ್ತಮುತ್ತ ಹುಡುಕಾಡಿದರೂ ಸುಳಿವು ಸಿಕ್ಕಿರಲಿಲ್ಲ.
ಎರ್ಮಾಳ ಅರಣ್ಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ: ಸೆಪ್ಟೆಂಬರ್ 18 ರಂದು ಬೆಳಿಗ್ಗೆ 9:00 ಗಂಟೆಯ ಸುಮಾರಿಗೆ ಕುಂತೂರು ಗ್ರಾಮದ ಎರ್ಮಾಳ ಅರಣ್ಯ ಪ್ರದೇಶದಲ್ಲಿ ಶೇಖರ್ ಮರವೊಂದಕ್ಕೆ ಬೈರಸ್ (ದೊಡ್ಡ ಟವಲ್) ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ.
ಸೆ.17ರ ರಾತ್ರಿ 10:30 ರಿಂದ ಸೆ.18ರ ಬೆಳಿಗ್ಗೆ 9:00 ಗಂಟೆಯ ಅವಧಿಯಲ್ಲಿ ಪತ್ನಿ ಜತೆಗಿನ ಜಗಳಕ್ಕೆ ಮನನೊಂದು, ಜೀವನದಲ್ಲಿ ಜಿಗುಪ್ಸೆಗೊಂಡು ಈ ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ ಎಂದು ಅಣ್ಣ ಗಂಗಾಧರ ಕಡಬ ಪೊಲೀಸರಿಗೆ ದೂರು ನೀಡಿದ್ದಾರೆ.
ಮೃತನ ಅಣ್ಣ ಗಂಗಾಧರ ನೀಡಿದ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ ಸಂಖ್ಯೆ: 38/2026 ಕಲಂ: 194 BNSS-2023 (ಅಸ್ವಾಭಾವಿಕ ಸಾವು) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕಡಬ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಮಹಜರು ನಡೆಸಿದ್ದು, ಶವಪರೀಕ್ಷೆಯ ನಂತರ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.
