
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಇತ್ತೀಚೆಗೆ ಆಡಿಯೋ ಹರಿಬಿಟ್ಟು ಸದ್ದು ಮಾಡಿದ್ದ ಕಾಂಗ್ರೆಸ್ ಕಾರ್ಯಕರ್ತ ಹಕೀಂ ಕೂರ್ನಡ್ಕ ಅವರು ಪುತ್ತೂರು ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿ ನಡೆಸಲು ಆಗಮಿಸಿದ ವೇಳೆ ಕಾಂಗ್ರೆಸ್ ಕಾರ್ಯಕರ್ತರ ಎರಡು ಬಣಗಳ ನಡುವೆ ತೀವ್ರ ಜಟಾಪಟಿ ಮತ್ತು ಗದ್ದಲ ನಡೆದಿದೆ.


ಸೆಪ್ಟೆಂಬರ್ 1 ರಂದು ಮಧ್ಯಾಹ್ನ ಪುತ್ತೂರು ಪತ್ರಿಕಾ ಭವನದ ಮುಂಭಾಗ ಈ ಹೈಡ್ರಾಮಾ ನಡೆದಿದೆ.
ಪ್ರೆಸ್ ಕ್ಲಬ್ ಮುಂದೆ ಆಕ್ರೋಶ: ಶಾಸಕರ ವಿರುದ್ಧ ಆಡಿಯೋ ಹರಿಬಿಟ್ಟು ಮುಜುಗರ ಉಂಟುಮಾಡಿದ್ದಾರೆ ಎಂದು ಆಕ್ರೋಶಗೊಂಡ ಶಾಸಕ ಅಶೋಕ್ ರೈ ಅವರ ನೂರಾರು ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪತ್ರಿಕಾ ಭವನದ ಮುಂದೆ ಜಮಾಯಿಸಿದರು. ಹಕೀಂ ಕೂರ್ನಡ್ಕ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತು ಶಾಸಕ ಅಶೋಕ್ ರೈ ಸ್ವತಃ ಸ್ಥಳಕ್ಕೆ ಧಾವಿಸಿ, ತಮ್ಮ ಬೆಂಬಲಿಗರನ್ನು ಹಾಗೂ ಕಾರ್ಯಕರ್ತರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು.


ಪೊಲೀಸ್ ಜೀಪಿನಲ್ಲಿ ಹಕೀಂ ಕೂರ್ನಡ್ಕ ರಕ್ಷಣೆ: ಹಕೀಂ ಕೂರ್ನಡ್ಕ ಅವರು ಪತ್ರಿಕಾಗೋಷ್ಠಿ ನಡೆಸಿ ಹೊರಬರುತ್ತಿದ್ದಂತೆಯೇ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ನೂರಾರು ಮಂದಿ ಸುತ್ತುವರಿದು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಹಲ್ಲೆ ನಡೆಯುವ ಸಾಧ್ಯತೆಯನ್ನು ಮನಗಂಡ ಸ್ಥಳೀಯ ಪೊಲೀಸರು ಹರಸಾಹಸ ಪಟ್ಟು ಹಕೀಂ ಅವರನ್ನು ರಕ್ಷಿಸಿ, ತಮ್ಮ ಪೊಲೀಸ್ ಜೀಪಿನಲ್ಲೇ ಭದ್ರತೆಯೊಂದಿಗೆ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು.
ಇದೇ ವೇಳೆ ಹಕೀಂ ಅವರ ಜೊತೆಯಲ್ಲಿದ್ದ ಇಬ್ಬರು ಬೆಂಬಲಿಗರ ಮೇಲೆ ಹಲ್ಲೆಗೆ ಯತ್ನ ನಡೆದಿದೆ ಎನ್ನಲಾಗಿದ್ದು, ಪೊಲೀಸರು ಲಘು ಬಲಪ್ರಯೋಗ ನಡೆಸಿ ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ಬಹಿರಂಗವಾದ ಕಾಂಗ್ರೆಸ್ ಆಂತರಿಕ ಬಣ ರಾಜಕೀಯ: ಪುತ್ತೂರಿನಲ್ಲಿ ಸಾರ್ವಜನಿಕವಾಗಿ ಹಾಗೂ ಪೊಲೀಸ್ ಭದ್ರತೆಯ ನಡುವೆಯೇ ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಮುಖಾಮುಖಿಯಾಗಿ ಗಲಾಟೆ ನಡೆಸಿದ್ದು, ಸ್ಥಳೀಯ ಕಾಂಗ್ರೆಸ್ನಲ್ಲಿರುವ ತೀವ್ರ ಆಂತರಿಕ ಭಿನ್ನಮತ ಹಾಗೂ ಅಸಮಾಧಾನವನ್ನು ಮತ್ತೊಮ್ಮೆ ಬೀದಿಗೆ ತಂದಿದೆ. ಘಟನೆಯ ಕುರಿತು ಪುತ್ತೂರು ನಗರ ಠಾಣಾ ಪೊಲೀಸರು ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
