
ಪುತ್ತೂರು:ಮಗುವಿನ ಜನನ ಪ್ರಮಾಣಪತ್ರ (ಬರ್ತ್ ಸರ್ಟಿಫಿಕೇಟ್) ಲ್ಯಾಮಿನೇಷನ್ ಮಾಡುವ ವೇಳೆ ದಾಖಲೆ ಸುಟ್ಟು ಹಾನಿಯಾಗಿದೆ ಎಂಬ ವಿಚಾರವಾಗಿ ಆರಂಭವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಪುತ್ತೂರು ದರ್ಬೆಯ ಸೈಬರ್ ಗಲಾಟೆ ಪ್ರಕರಣದ ಇಬ್ಬರೂ ಆರೋಪಿಗಳಿಗೆ ಪುತ್ತೂರಿನ ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.


ದರ್ಬೆಯ ‘ಡ್ರೀಮ್ ಡೆಸ್ಟಿನೇಷನ್’ ಜನಸೇವಾ ಕೇಂದ್ರದ ಮಾಲಕಿ ಅಂಜನಾ ಎಸ್. ಪೈ ಹಾಗೂ ಅವರ ಪುತ್ರ ಸುದರ್ಶನ್ ಪೈ ಜಾಮೀನು ಪಡೆದ ಆರೋಪಿಗಳು.
ಅಂಜನಾ ಪೈಗೆ ನಿರೀಕ್ಷಣಾ ಜಾಮೀನು – ಸುದರ್ಶನ್ಗೆ ಬೇಲ್: ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು:
-
ಗಲಾಟೆಯ ಸಂದರ್ಭ ಕಾಲಿಗೆ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೇಂದ್ರದ ಮಾಲಕಿ ಅಂಜನಾ ಎಸ್. ಪೈ ಅವರಿಗೆ ನಿರೀಕ್ಷಣಾ ಜಾಮೀನು (Anticipatory Bail) ಮಂಜೂರು ಮಾಡಿದೆ.
-
ಘಟನೆ ಬೆನ್ನಲ್ಲೇ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಅವರ ಪುತ್ರ ಸುದರ್ಶನ್ ಪೈ ಅವರಿಗೆ ನಿಯಮಿತ ಜಾಮೀನು (Regular Bail) ನೀಡಿ ಆದೇಶಿಸಿದೆ.


ಘಟನೆಯ ಹಿನ್ನೆಲೆ :ಜನನ ಪ್ರಮಾಣಪತ್ರದ ಲ್ಯಾಮಿನೇಷನ್ ವೇಳೆ ದಾಖಲಾತಿ ಹಾನಿಗೊಳಗಾದ ವಿಚಾರವಾಗಿ ಗ್ರಾಹಕರು ಮತ್ತು ಅಂಗಡಿ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಸ್ಥಳಕ್ಕೆ ಬಂದ ಮಾಲಕಿ ಅಂಜನಾ ಪೈ ಹಾಗೂ ಸುದರ್ಶನ್ ಪೈ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿತ್ತು.
ಅಲ್ಲದೆ, ಸುದರ್ಶನ್ ಪೈ ಅವರು ತನಗೆ ಹಾಗೂ ತನ್ನ ತಂಗಿಯ ಮೇಲೆ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ್ದಾರೆ ಮತ್ತು ತನ್ನ ತಮ್ಮನನ್ನು ಗಾಜಿಗೆ ತಳ್ಳಿ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಿ ಫಾತಿಮತ್ ಮಿಸ್ಸಾನ್ ಎಂಬವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಬಿಎನ್ಎಸ್ ಅಡಿ ದಾಖಲಾಗಿದ್ದ ಕೇಸ್: ಫಾತಿಮತ್ ಮಿಸ್ಸಾನ್ ನೀಡಿದ ದೂರಿನ ಆಧಾರದ ಮೇಲೆ ಪುತ್ತೂರು ನಗರ ಠಾಣಾ ಪೊಲೀಸರು ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS 2023)ಯ ಕಲಂ 352 (ಶಾಂತಿಭಂಗಕ್ಕೆ ಯತ್ನ), 115(2) (ಹಲ್ಲೆ), 109 (ಕೊಲೆಯತ್ನ) ಹಾಗೂ 3(5) (ಸಾಮೂಹಿಕ ದುರುದ್ದೇಶ) ಅಡಿಯಲ್ಲಿ ಗಂಭೀರ ಪ್ರಕರಣ ದಾಖಲಿಸಿಕೊಂಡಿದ್ದರು.
ಪ್ರಕರಣದ ಸಾಕ್ಷ್ಯ ಮತ್ತು ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು ಇದೀಗ ತಾಯಿ ಮತ್ತು ಮಗ ಇಬ್ಬರಿಗೂ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.
