ಸವಣೂರು ಗ್ರಾಮ ಪಂಚಾಯಿತಿಗೆ ಲೋಕಾಯುಕ್ತ ಪೊಲೀಸರ ಎಂಟ್ರಿ

kadaba times

ಕಡಬ ತಾಲೂಕಿನ ಸವಣೂರು ಗ್ರಾಮ ಪಂಚಾಯಿತಿ ಕಚೇರಿಗೆ ಲೋಕಾಯುಕ್ತ ಪೊಲೀಸರು ದಿಢೀರ್ ಭೇಟಿ ನೀಡಿ ಕಡತಗಳ ಸಮಗ್ರ ಪರಿಶೀಲನೆ ನಡೆಸಿದ್ದಾರೆ. ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ಡಿವೈಎಸ್ಪಿ ಹಲಾಮೂರ್ತಿ ರಾವ್ ನೇತೃತ್ವದ ಅಧಿಕಾರಿಗಳ ತಂಡವು ನರೇಗಾ ಕಾಮಗಾರಿಗಳು, ಅನುದಾನ ಬಳಕೆ ಮತ್ತು ಅರ್ಜಿ ವಿಲೇವಾರಿಗೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನು ತಪಾಸಣೆಗೊಳಪಡಿಸಿದೆ.

kadaba times
uniq

ಕಡಬ / ಸವಣೂರು: ಕಡಬ ತಾಲೂಕಿನ ಪ್ರಮುಖ ಪಂಚಾಯಿತಿಗಳಲ್ಲಿ ಒಂದಾದ ಸವಣೂರು ಗ್ರಾಮ ಪಂಚಾಯಿತಿ ಕಚೇರಿಗೆ ಲೋಕಾಯುಕ್ತ ಪೊಲೀಸರ ತಂಡ ದಿಢೀರ್ ಭೇಟಿ ನೀಡಿ, ವಿವಿಧ ಅಭಿವೃದ್ಧಿ ಕಾಮಗಾರಿಗಳ ಕಡತಗಳು ಹಾಗೂ ಆಡಳಿತಾತ್ಮಕ ದಾಖಲೆಗಳ ತೀವ್ರ ಪರಿಶೀಲನೆ ಕೈಗೊಂಡಿದೆ.

ಸವಣೂರು ಗ್ರಾಮ ಪಂಚಾಯಿತಿಯ ಕಾರ್ಯವೈಖರಿ, ಕಡತ ವಿಲೇವಾರಿ ವಿಳಂಬ ಹಾಗೂ ಅವ್ಯವಹಾರಗಳ ಕುರಿತು ಸಾರ್ವಜನಿಕರಿಂದ ನಿರಂತರವಾಗಿ ದೂರುಗಳು ವ್ಯಕ್ತವಾಗುತ್ತಿದ್ದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಸ್ವಯಂಪ್ರೇರಿತವಾಗಿ (Suo Moto) ದೂರು ದಾಖಲಿಸಿಕೊಂಡು ಈ ತನಿಖೆ ಕೈಗೆತ್ತಿಕೊಂಡಿದ್ದಾರೆ ಎನ್ನಲಾಗಿದೆ.

ಕಚೇರಿ ದಾಖಲೆಗಳ ಸಮಗ್ರ ತಪಾಸಣೆ: ಲೋಕಾಯುಕ್ತ ತಂಡವು ಪಂಚಾಯಿತಿ ಕಚೇರಿಗೆ ಪ್ರವೇಶಿಸಿ ಕಚೇರಿಯ ಪ್ರಮುಖ ವಿಭಾಗಗಳ ದಾಖಲೆಗಳನ್ನು ತಮ್ಮ ವಶಕ್ಕೆ ಪಡೆದು ಸುದೀರ್ಘ ಪರಿಶೀಲನೆ ನಡೆಸಿತು. ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸರಕಾರಿ ಅನುದಾನ ಬಳಕೆಯ ವಿವರಗಳು,ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (MGNREGA) ಯೋಜನೆಯಡಿ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳ ಬಿಲ್ ಪಾವತಿ ದಾಖಲೆಗಳು,ಸಾರ್ವಜನಿಕರು ಸಲ್ಲಿಸಿರುವ ಅರ್ಜಿಗಳ ವಿಲೇವಾರಿ ಸ್ಥಿತಿಗತಿ,ಕಟ್ಟಡ ನಿರ್ಮಾಣ ಪರವಾನಗಿಗಳು (Building Licenses) ಹಾಗೂ ಇ-ಸ್ವತ್ತು/ಖಾತಾ ಬದಲಾವಣೆ ದಾಖಲೆಗಳು,ಪಂಚಾಯಿತಿ ಸಿಬ್ಬಂದಿಯ ಹಾಜರಾತಿ ಪುಸ್ತಕಗಳು ಮತ್ತು ಸಾರ್ವಜನಿಕ ಸೇವೆಗಳ ನಿರ್ವಹಣಾ ಕಡತಗಳು. ಇದಲ್ಲದೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಹಾಗೂ ಕಚೇರಿ ಸಿಬ್ಬಂದಿಯನ್ನು ಪ್ರತ್ಯೇಕವಾಗಿ ವಿಚಾರಣೆಗೊಳಪಡಿಸಿ ಮಾಹಿತಿ ಕಲೆಹಾಕಲಾಗಿದೆ ಎನ್ನಲಾಗಿದೆ.

kadaba times
kadaba times

ಲೋಕಾಯುಕ್ತ ಅಧಿಕಾರಿಗಳ ತಂಡ: ಈ ಮಹತ್ವದ ಕಾರ್ಯಾಚರಣೆಯು ಲೋಕಾಯುಕ್ತ ಡಿವೈಎಸ್ಪಿ (DySP) ಹಲಾಮೂರ್ತಿ ರಾವ್ ಅವರ ನೇತೃತ್ವದಲ್ಲಿ ನಡೆದಿದೆ. ತನಿಖಾ ತಂಡದಲ್ಲಿ ಲೋಕಾಯುಕ್ತ ಪೊಲೀಸ್ ಸಿಬ್ಬಂದಿಗಳಾದ ನಾಗರಾಜ್, ಪ್ರಸನ್ನ, ಸುದೀಪ್ ಹಾಗೂ ಜಲಾಲ್ ಪಾಲ್ಗೊಂಡಿದ್ದರು.

ಇತ್ತೀಚೆಗಷ್ಟೇ ಕಡಬ ತಾಲೂಕಿನ ನೆಲ್ಯಾಡಿ, ಶಿರಾಡಿ ಮತ್ತು ಮರ್ದಾಳ ಪಂಚಾಯಿತಿಗಳಿಗೆ ದಾಳಿ ನಡೆಸಿದ್ದ ಲೋಕಾಯುಕ್ತ ತಂಡ, ಇದೀಗ ಸವಣೂರು ಗ್ರಾಮ ಪಂಚಾಯಿತಿಗೂ ಎಂಟ್ರಿ ಕೊಟ್ಟಿರುವುದು ತಾಲೂಕಿನ ಇತರೆ ಗ್ರಾಮ ಪಂಚಾಯಿತಿ ಅಧಿಕಾರಿ ಹಾಗೂ ನೌಕರರ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

Related Articles

Latest Articles