
ಕಡಬ:ಉಪ್ಪಿನಂಗಡಿ–ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ಗ್ರಾಮದ ಪೆರ್ಲದ ಕೆರೆ ಸಮೀಪ ರಸ್ತೆ ದಾಟಲು ನಿಂತಿದ್ದ ವೃದ್ಧೆಯೊಬ್ಬರಿಗೆ ಮೋಟಾರ್ ಸೈಕಲ್ ಡಿಕ್ಕಿಯಾಗಿ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.


ಪೆರ್ಲದ ಕೆರೆ ನಿವಾಸಿ, ದಿವಂಗತ ಕೃಷ್ಣಪ್ಪ ಭಂಡಾರಿ ಅವರ ಪತ್ನಿ ವಾರಿಜಾ (81) ಮೃತಪಟ್ಟ ದುರ್ದೈವಿ ವೃದ್ಧೆ.
ರಸ್ತೆ ದಾಟುವಾಗ ಸಂಭವಿಸಿದ ಅಪಘಾತ: ದಿನಾಂಕ 31.08.2026 ರಂದು ಮಧ್ಯಾಹ್ನ ಸುಮಾರು 12:35 ರಿಂದ 12:45 ರ ವೇಳೆಗೆ, ಕಡಬ ಗ್ರಾಮದ ಪೆರ್ಲದ ಕೆರೆ ಎಂಬಲ್ಲಿ ಆಟೋ ಹಬ್ ಗ್ಯಾರೇಜ್ ಎದುರಿನ ಸುಬ್ರಹ್ಮಣ್ಯ–ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ ವಾರಿಜಾ ಅವರು ರಸ್ತೆ ದಾಟಲು ನಿಂತುಕೊಂಡಿದ್ದರು.
ಆ ಸಮಯದಲ್ಲಿ ಕಡಬ ಕಡೆಯಿಂದ ಬಲ್ಯ ಕಡೆಗೆ ಅತಿವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದ ಮೋಟಾರ್ ಸೈಕಲ್ (ನೋಂದಣಿ ಸಂಖ್ಯೆ: KA 19 HA 1452) ಸವಾರ ಚಂದ್ರಶೇಖರ ಎಂಬಾತ ರಸ್ತೆ ಬದಿಯಲ್ಲಿದ್ದ ವೃದ್ಧೆ ವಾರಿಜಾ ಅವರಿಗೆ ರಭಸವಾಗಿ ಡಿಕ್ಕಿ ಹೊಡೆದಿದ್ದಾನೆ.


ವೆನ್ಲಾಕ್ ಆಸ್ಪತ್ರೆಯಲ್ಲಿ ಕೊನೆಯುಸಿರು: ಅಪಘಾತದ ರಭಸಕ್ಕೆ ತಲೆಗೆ ಗಂಭೀರ ಗಾಯಗೊಂಡಿದ್ದ ವಾರಿಜಾ ಅವರನ್ನು ತಕ್ಷಣವೇ ಸ್ಥಳೀಯರು ಹಾಗೂ ಬೈಕ್ ಸವಾರ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ರವಾನಿಸಲಾಯಿತು.
ಬಳಿಕ ವೈದ್ಯರ ಸಲಹೆಯಂತೆ ಆ್ಯಂಬುಲೆನ್ಸ್ ಮೂಲಕ ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಗಾಯದ ತೀವ್ರತೆ ಹೆಚ್ಚಾಗಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಸೆಪ್ಟೆಂಬರ್ 1 ರಂದು ಬೆಳಿಗ್ಗೆ 06:25 ಗಂಟೆಗೆ ವಾರಿಜಾ ಅವರು ಕೊನೆಯುಸಿರೆಳೆದಿದ್ದಾರೆ.
ಕಡಬ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು:ಮೃತರ ಸಂಬಂಧಿ, ಆಟೋ ಚಾಲಕ ಧನಂಜಯ (52) ಅವರು ನೀಡಿದ ದೂರಿನನ್ವಯ ಕಡಬ ಪೊಲೀಸ್ ಠಾಣೆಯಲ್ಲಿಅಪರಾಧ ಸಂಖ್ಯೆ: 103/2026 ಕಲಂಗಳು: 106 (ನಿರ್ಲಕ್ಷ್ಯದ ಚಾಲನೆಯಿಂದ ಸಾವು), 281 (ಅಜಾಗರೂಕ ಚಾಲನೆ) BNS-2023 ಅಡಿಯಲ್ಲಿ ಬೈಕ್ ಸವಾರ ಚಂದ್ರಶೇಖರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪಿಎಸ್ಐ ಜಂಬುರಾಜ್ ಮಹಾಜನ್ ಅವರ ಮಾರ್ಗದರ್ಶನದಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
