
2015ರಲ್ಲಿ ಬೆಳ್ತಂಗಡಿ ತಾಲೂಕು ಕಚೇರಿ ಬಳಿ ನಡೆದ ಪಿಎಫ್ಐ ಪ್ರತಿಭಟನಾ ಸಭೆಯಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆಯಾಗುವಂತೆ ಪ್ರಚೋದನಕಾರಿ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಾಝ್ ಫರಂಗಿಪೇಟೆ ವಿರುದ್ಧ ಆರೋಪ ಸಾಬೀತಾಗಿದೆ. ನ್ಯಾಯಾಲಯವು ಆರೋಪಿಗೆ ಕಲಂ 153(A) ರಡಿ 6 ತಿಂಗಳ ಸಾದಾ ಜೈಲು ಶಿಕ್ಷೆ ಹಾಗೂ ₹10,000 ದಂಡ ವಿಧಿಸಿ ತೀರ್ಪು ನೀಡಿದೆ


ಕಳೆದ 2015ರಲ್ಲಿ ಬೆಳ್ತಂಗಡಿ ತಾಲೂಕು ಕಚೇರಿ ಬಳಿ ನಡೆದಿದ್ದ ಪ್ರತಿಭಟನಾ ಸಭೆಯಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆಯಾಗುವಂತೆ ಹಾಗೂ ಸಮಾಜದಲ್ಲಿ ವೈಷಮ್ಯ ಮೂಡಿಸುವ ರೀತಿಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪ ಎದುರಿಸುತ್ತಿದ್ದ ರಿಯಾಝ್ ಫರಂಗಿಪೇಟೆ ವಿರುದ್ಧ ಆರೋಪ ಸಾಬೀತಾಗಿದ್ದು, ನ್ಯಾಯಾಲಯವು ಅವರಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಆರೋಪಿ ರಿಯಾಝ್ ಫರಂಗಿಪೇಟೆಗೆ ಭಾರತೀಯ ದಂಡ ಸಂಹಿತೆ (IPC) ಕಲಂ 153(A) ಅಡಿಯಲ್ಲಿ 6 ತಿಂಗಳ ಸಾದಾ ಕಾರಾಗೃಹ ವಾಸ (ಜೈಲು ಶಿಕ್ಷೆ) ಹಾಗೂ ₹10,000 ದಂಡ ವಿಧಿಸಿ ಬೆಳ್ತಂಗಡಿ ನ್ಯಾಯಾಲಯ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: 2015 ಜುಲೈ 23 ರಂದು ಬೆಳ್ತಂಗಡಿ ತಾಲೂಕು ಕಚೇರಿ ಸಮೀಪ ಪಿಎಫ್ಐ (PFI) ಸಂಘಟನೆಯ ವತಿಯಿಂದ ಪ್ರತಿಭಟನಾ ಸಭೆಯೊಂದನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಪಾಲ್ಗೊಂಡಿದ್ದ ರಿಯಾಝ್ ಫರಂಗಿಪೇಟೆ ಧಾರ್ಮಿಕ ಭಾವನೆಗೆ ಧಕ್ಕೆಯಾಗುವಂತೆ ಭಾಷಣ ಮಾಡಿದ್ದರೆನ್ನಲಾಗಿತ್ತು. ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದ್ವೇಷಪೂರಿತ ಭಾಷಣದ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.


ಪ್ರಕರಣದ ತನಿಖೆಯನ್ನು ಅಂದಿನ ಬೆಳ್ತಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕರು ಹಾಗೂ ತನಿಖಾಧಿಕಾರಿಯಾಗಿದ್ದ ರವಿ ಬಿ.ಎಸ್. ಅವರು ನಡೆಸಿ, ಅಗತ್ಯ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ (Charge Sheet) ಸಲ್ಲಿಸಿದ್ದರು.
ನ್ಯಾಯಾಲಯದಲ್ಲಿ ಸುದೀರ್ಘ ವಿಚಾರಣೆ ನಡೆದಿದ್ದು, ಸರ್ಕಾರಿ ಅಭಿಯೋಜಕರಾದ ಆಶೀತ ಅವರು ಸರ್ಕಾರ ಹಾಗೂ ಸಾರ್ವಜನಿಕ ಹಿತಾಸಕ್ತಿಯ ಪರವಾಗಿ ಪ್ರಬಲ ವಾದ ಮಂಡಿಸಿದ್ದರು. ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಗೌರವಾನ್ವಿತ ನ್ಯಾಯಾಧೀಶರಾದ ರಾಮಲಿಂಗಪ್ಪ ಅವರು ಆರೋಪಿಯ ಮೇಲಿನ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ 6 ತಿಂಗಳು ಜೈಲು ಶಿಕ್ಷೆ ಹಾಗೂ ₹10,000 ದಂಡ ವಿಧಿಸಿ ಆದೇಶಿಸಿದ್ದಾರೆ.
