
ಕಡಬ ತಾಲೂಕಿನ ಕುಂತೂರು ಗ್ರಾಮದ ಕೇವಳ ನಿವಾಸಿ ಯಾದವ ಗೌಡ ಅವರು ಕೃಷಿ ಕೆಲಸದಲ್ಲಿದ್ದಾಗ ಅಡಿಕೆ ಮರ ಬಿದ್ದು ಮೃತಪಟ್ಟಿದ್ದು, ಅವರ ಮನೆಗೆ ಸುಳ್ಯ ಶಾಸಕರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಸರ್ಕಾರದಿಂದ ಮಂಜೂರಾದ ₹5 ಲಕ್ಷ ಪ್ರಾಕೃತಿಕ ವಿಕೋಪ ಜೀವಹಾನಿ ಪರಿಹಾರದ ಆದೇಶ ಪತ್ರವನ್ನು ಮೃತರ ಪತ್ನಿ ಪ್ರೇಮಾ ಅವರಿಗೆ ಹಸ್ತಾಂತರಿಸಲಾಯಿತು


ಕಡಬ / ಕುಂತೂರು:ಕಡಬ ತಾಲೂಕಿನ ಕುಂತೂರು ಗ್ರಾಮದ ಕೇವಳ ನಿವಾಸಿ ಕೃಷಿಕ ಯಾದವ ಗೌಡ ಅವರು ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಅಡಿಕೆ ಮರ ಬಿದ್ದು ದಾರುಣವಾಗಿ ಮೃತಪಟ್ಟಿದ್ದರು. ದುರಂತದ ಸುದ್ದಿ ತಿಳಿದ ಸುಳ್ಯ ಕ್ಷೇತ್ರದ ಶಾಸಕರು ಶಾಸಕರ ತಂಡದೊಂದಿಗೆ ಮೃತರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿ ಸಾಂತ್ವನ ಹೇಳಿದರು.
ಅಲ್ಲದೆ, ಪ್ರಾಕೃತಿಕ ವಿಕೋಪದಡಿ ಸರ್ಕಾರದಿಂದ ಮಂಜೂರಾದ ₹5,00,000 (ಐದು ಲಕ್ಷ ರೂಪಾಯಿ) ಜೀವಹಾನಿ ಪರಿಹಾರದ ಮಂಜೂರಾತಿ ಆದೇಶ ಪತ್ರವನ್ನು ಮೃತರ ಪತ್ನಿ ಪ್ರೇಮಾ ಅವರಿಗೆ ಹಸ್ತಾಂತರಿಸಿದರು.


ಘಟನೆ ನಡೆದ ಬಳಿಕ ಕಡಬ ತಾಲೂಕು ತಹಶೀಲ್ದಾರ್ ಹಾಗೂ ಕಂದಾಯ ಇಲಾಖಾ ಅಧಿಕಾರಿಗಳು ತಕ್ಷಣವೇ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದರು. ಕಡಬ ವಿಶೇಷ ತಹಶೀಲ್ದಾರ್ ಅವರ ಆದೇಶದಂತೆ, ರಾಜ್ಯ ಸರ್ಕಾರದ ಖಜಾನೆ-2 (Khajane II) ಇ-ಪಾವತಿ ವ್ಯವಸ್ಥೆಯ ಮೂಲಕ ಜುಲೈ/ಆಗಸ್ಟ್ ಅವಧಿಯಲ್ಲಿ ಪರಿಹಾರ ಮೊತ್ತವನ್ನು (₹5 ಲಕ್ಷ) ಮೃತರ ಪತ್ನಿ ಪ್ರೇಮಾ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕಿಯವರು ಪರಿಹಾರ ಧನವು ಕುಟುಂಬಕ್ಕೆ ಸಣ್ಣ ನೆರವಾಗಲಿದ್ದು, ಅವರ ಕುಟುಂಬದೊಂದಿಗೆ ನಾವಿದ್ದೇವೆ” ಎಂದು ತಿಳಿಸಿದರು. ಈ ಭೇಟಿಯ ಸಂದರ್ಭದಲ್ಲಿ ಸುಳ್ಯ ಬಿಜೆಪಿ ಮಂಡಲದ ಪ್ರಮುಖ ನಾಯಕರು ಉಪಸ್ಥಿತರಿದ್ದರು.
