ನೆಲ್ಯಾಡಿಯಲ್ಲಿರುವ ‘ಶಿರಾಡಿ ಹೊರಠಾಣೆ’ ಮೇಲ್ದರ್ಜೆ ಪ್ರಕ್ರಿಯೆ

kadaba times

ನೆಲ್ಯಾಡಿ / ಕಡಬ: ಕಡಬ ತಾಲೂಕಿನ ಪ್ರಮುಖ ವಾಣಿಜ್ಯ ಕೇಂದ್ರವಾದ ನೆಲ್ಯಾಡಿಯಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿರುವ ‘ಶಿರಾಡಿ ಹೊರಠಾಣೆ’ಯನ್ನು (Shiradi Outpost) ಪೂರ್ಣ ಪ್ರಮಾಣದ ಪೊಲೀಸ್ ಠಾಣೆಯನ್ನಾಗಿ ಮೇಲ್ದರ್ಜೆಗೇರಿಸುವ ಮಹತ್ವದ ಪ್ರಕ್ರಿಯೆಗೆ ಅಧಿಕೃತ ಚಾಲನೆ ದೊರೆತಿದೆ.

kadaba times
uniq

ಈ ಸಂಬಂಧ ಸಮಗ್ರ ಮಾಹಿತಿ ಕಲೆಹಾಕಿ ವರದಿ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು (SP) ಆದೇಶಿಸಿದ್ದು, ಇದರ ಬೆನ್ನಲ್ಲೇ ಬೆಳ್ತಂಗಡಿ ಉಪವಿಭಾಗದ ಡಿವೈಎಸ್‌ಪಿ ಕಚೇರಿಯಿಂದ ಉಪ್ಪಿನಂಗಡಿ ಹಾಗೂ ಬೆಳ್ತಂಗಡಿ ವೃತ್ತ ನಿರೀಕ್ಷಕರಿಗೆ (CI) ಮಾಹಿತಿ ಸಂಗ್ರಹಿಸಿ ವರದಿ ನೀಡಲು ಸೂಚನೆ ರವಾನೆಯಾಗಿದೆ.

3 ಪ್ರಮುಖ ಠಾಣೆಗಳ 15 ಗ್ರಾಮಗಳು ಸೇರ್ಪಡೆ: ಪ್ರಸ್ತುತ ಉಪ್ಪಿನಂಗಡಿ ಠಾಣೆ ವ್ಯಾಪ್ತಿಗೆ 22, ಕಡಬ ಠಾಣೆ ವ್ಯಾಪ್ತಿಗೆ 19 ಹಾಗೂ ಧರ್ಮಸ್ಥಳ ಠಾಣೆ ವ್ಯಾಪ್ತಿಗೆ 18 ಗ್ರಾಮಗಳು ಒಳಪಟ್ಟಿವೆ. ಶಿರಾಡಿ ಹೊರಠಾಣೆಯು ಪೂರ್ಣಪ್ರಮಾಣದ ಠಾಣೆಯಾಗಿ ಮೇಲ್ದರ್ಜೆಗೇರಿದರೆ, ಈ ಮೂರು ಠಾಣೆಗಳ ವ್ಯಾಪ್ತಿಯಿಂದ ಒಟ್ಟು 15 ಗ್ರಾಮಗಳು ನೂತನ ನೆಲ್ಯಾಡಿ/ಶಿರಾಡಿ ಠಾಣೆಗೆ ಸೇರ್ಪಡೆಯಾಗಲಿವೆ

  • ಉಪ್ಪಿನಂಗಡಿ ಠಾಣೆಯಿಂದ (7 ಗ್ರಾಮಗಳು): ನೆಲ್ಯಾಡಿ, ಕೌಕ್ರಾಡಿ, ಇಚ್ಲಂಪಾಡಿ, ಶಿರಾಡಿ, ಸಿರಿಬಾಗಿಲು, ಕೊಣಾಜೆ, ಕೊಣಾಲು.

  • ಕಡಬ ಠಾಣೆಯಿಂದ (3 ಗ್ರಾಮಗಳು): ನೂಜಿಬಾಳ್ತಿಲ, ಬಲ್ಯ, ಹಳೆನೇರೆಂಕಿ.

    kadaba times
    kadaba times
  • ಧರ್ಮಸ್ಥಳ ಠಾಣೆಯಿಂದ (5 ಗ್ರಾಮಗಳು): ರೆಖ್ಯ, ಹತ್ಯಡ್ಕ, ಶಿಶಿಲ, ಶಿಬಾಜೆ, ಕೊಕ್ಕಡ.

ಈ ಹಿನ್ನೆಲೆಯಲ್ಲಿ ನೂತನ ಠಾಣಾ ವ್ಯಾಪ್ತಿಗೆ ಒಳಪಡಲಿರುವ ಗ್ರಾಮಗಳ ಪಟ್ಟಿ ಹಾಗೂ 2023 ರಿಂದ ಈವರೆಗೆ ಆ ಗ್ರಾಮಗಳಲ್ಲಿ ದಾಖಲಾಗಿರುವ ಕ್ರೈಂ (ಅಪರಾಧ) ಪ್ರಕರಣಗಳ ಅಂಕಿ-ಅಂಶಗಳ ವಿವರವನ್ನು ನೀಡುವಂತೆ ಆದೇಶದಲ್ಲಿ ನಿರ್ದೇಶಿಸಲಾಗಿದೆ.

ಹಿಂದೆ ಗೃಹ ಸಚಿವರಿಗೆ ಸಲ್ಲಿಸಲಾಗಿದ್ದ ಮನವಿ: ಶಿರಾಡಿ ಹೊರಠಾಣೆಯನ್ನು ಪೂರ್ಣಪ್ರಮಾಣದ ನೂತನ ಠಾಣೆಯನ್ನಾಗಿ ಪರಿವರ್ತಿಸುವಂತೆ ಕಡಬ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯೆ ಉಷಾ ಅಂಚನ್ ಅವರು ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮನವಿ ಸಲ್ಲಿಸಿದ್ದರು.

ಮನವಿಗೆ ಸ್ಪಂದಿಸಿದ್ದ ಸಚಿವರು ಈ ಕುರಿತು ಪ್ರಸ್ತಾವನೆ ಸಲ್ಲಿಸಲು ಜಿಲ್ಲಾ ಎಸ್ಪಿಯವರಿಗೆ ಸೂಚಿಸಿದ್ದರು. ಅದರಂತೆ ಕೌಕ್ರಾಡಿ ಗ್ರಾ.ಪಂ.ನಲ್ಲಿ ಸಾರ್ವಜನಿಕರ ಸಭೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಆ ಬಳಿಕ ನನೆಗುದಿಗೆ ಬಿದ್ದಿದ್ದ ಈ ಮಹತ್ವದ ಯೋಜನೆಗೆ ಈಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೂತನ ಆದೇಶದ ಮೂಲಕ ಮರುಜೀವ ಬಂದಿದೆ.

Related Articles

Latest Articles