
ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದ್ದು, ತಂಬಾಕು ಹಾಗೂ ನಿಕೋಟಿನ್ ಹೊಂದಿರುವ ಗುಟ್ಕಾ, ಪಾನ್ ಮಸಾಲಾದಂತಹ ಉತ್ಪನ್ನಗಳ ತಯಾರಿಕೆ, ಸಂಗ್ರಹಣೆ, ಸಾಗಣೆ ಹಾಗೂ ಮಾರಾಟದ ಮೇಲೆ ಆಗಸ್ಟ್ 10 ರಿಂದ ಜಾರಿಗೆ ಬರುವಂತೆ ಒಂದು ವರ್ಷಗಳ ಕಾಲ ಸಂಪೂರ್ಣ ನಿಷೇಧ ಹೇರಿ ಅಧಿಕೃತ ಅಧಿಸೂಚನೆ ಹೊರಡಿಸಿದೆ.


ಬೆಂಗಳೂರು: ಸಾರ್ವಜನಿಕ ಆರೋಗ್ಯ ರಕ್ಷಣೆ ಹಾಗೂ ವ್ಯಸನಮುಕ್ತ ಸಮಾಜ ನಿರ್ಮಾಣದ ಉದ್ದೇಶದಿಂದ ಕರ್ನಾಟಕ ರಾಜ್ಯ ಸರ್ಕಾರವು ಅತ್ಯಂತ ಮಹತ್ವದ ಆದೇಶ ಹೊರಡಿಸಿದ್ದು, ತಂಬಾಕು ಹಾಗೂ ಗುಟ್ಕಾ, ಪಾನ್ ಮಸಾಲಾದಂತಹ ನಿಕೋಟಿನ್ ಹೊಂದಿರುವ ಎಲ್ಲಾ ರೀತಿಯ ಉತ್ಪನ್ನಗಳ ಮಾರಾಟ ಹಾಗೂ ವಿತರಣೆಯನ್ನು ಒಂದು ವರ್ಷದ ಅವಧಿಗೆ ಸಂಪೂರ್ಣವಾಗಿ ನಿಷೇಧಿಸಿದೆ.
ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಆಹಾರ ಸುರಕ್ಷತೆ ಮತ್ತು ಕಾಯ್ದೆ 2006 ರ ನಿಯಮ 30(2)(a) ಹಾಗೂ Food Safety and Standards (Prohibition and Restrictions on Sales) Regulations, 2011 ನಿಯಮ 2.3.4 ರ ಅಧಿಕಾರನ್ವಯ ಆಗಸ್ಟ್ 10 ರಂದು ಈ ಕುರಿತು ಅಧಿಕೃತ ಸರಕಾರಿ ಅಧಿಸೂಚನೆ ಹೊರಡಿಸಿದೆ.
ಅಧಿಸೂಚನೆ ಹೊರಡಿಸಿದ ದಿನದಿಂದಲೇ ನಿಯಮ ಜಾರಿ:
ಸದರಿ ನಿಷೇಧಾಜ್ಞೆಯು ಅಧಿಸೂಚನೆ ಹೊರಡಿಸಿದ ದಿನಾಂಕದಿಂದ (ಆಗಸ್ಟ್ 10) ಜಾರಿಗೆ ಬರುವಂತೆ ಮುಂದಿನ ಒಂದು ವರ್ಷದ ಅವಧಿಯವರೆಗೆ ರಾಜ್ಯಾದ್ಯಂತ ಅನ್ವಯವಾಗಲಿದೆ ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಯುಕ್ತರು ತಮ್ಮ ಪತ್ರಿಕಾ ಪ್ರಕಟನೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಹಾರ ಸುರಕ್ಷತಾ ವಿಭಾಗದ ವತಿಯಿಂದ ಈ ನಿಷೇಧವನ್ನು ರಾಜ್ಯಾದ್ಯಂತ ಕಟ್ಟುನಿಟ್ಟಾಗಿ ಜಾರಿಗೆ ತರಲು ತೀವ್ರ ಕ್ರಮ ಕೈಗೊಳ್ಳಲಾಗುತ್ತಿದೆ.
ತಯಾರಿಕೆ, ಸಂಗ್ರಹ, ಮಾರಾಟ ಮಾಡಿದರೆ ಬೀಳಲಿದೆ ಜೈಲು ಶಿಕ್ಷೆ-ದಂಡ:
ತಂಬಾಕು ಮತ್ತು/ಅಥವಾ ನಿಕೋಟಿನ್ ಹೊಂದಿರುವ ಗುಟ್ಕಾ, ಪಾನ್ ಮಸಾಲಾ ಹಾಗೂ ಇತರ ನಿಷೇಧಿತ ಉತ್ಪನ್ನಗಳ:
-
ತಯಾರಿಕೆ (Manufacturing)


-
ಸಂಗ್ರಹಣೆ (Storage)
-
ಸಾಗಣೆ (Transportation)
-
ವಿತರಣೆ ಹಾಗೂ ಮಾರಾಟ (Distribution & Sale)
ಮಾಡುವವರ ವಿರುದ್ಧ ಆಹಾರ ಸುರಕ್ಷತಾ ಅಧಿಕಾರಿಗಳ (FSO) ನೇತೃತ್ವದಲ್ಲಿ ರಾಜ್ಯಾದ್ಯಂತ ವಿಶೇಷ ಕಾರ್ಯಾಚರಣೆ ಹಾಗೂ ಅಂಗಡಿ-ಮುಂಗಟ್ಟುಗಳ ತಪಾಸಣೆ ನಡೆಸಲಾಗುತ್ತಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಜರುಗಿಸಲಾಗುವುದು.
“ರಾಜ್ಯದ ಯಾವುದೇ ಭಾಗದಲ್ಲಿ ನಿಷೇಧಿತ ತಂಬಾಕು ಹಾಗೂ ನಿಕೋಟಿನ್ ಉತ್ಪನ್ನಗಳ ಅಕ್ರಮ ತಯಾರಿಕೆ, ಸಂಗ್ರಹ ಅಥವಾ ಮಾರಾಟ ಕಂಡುಬಂದಲ್ಲಿ, ಸಾರ್ವಜನಿಕರು ತಕ್ಷಣವೇ ಸಂಬಂಧಪಟ್ಟ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಆರೋಗ್ಯಕರ ಹಾಗೂ ವ್ಯಸನಮುಕ್ತ ಕರ್ನಾಟಕ ನಿರ್ಮಾಣಕ್ಕೆ ಪ್ರತಿಯೊಬ್ಬ ನಾಗರಿಕರೂ ಇಲಾಖೆಯೊಂದಿಗೆ ಕೈಜೋಡಿಸಬೇಕು” ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಮನವಿ ಮಾಡಿದೆ.
