
ಚೆಂಬು ಅರಣ್ಯ ವ್ಯಾಪ್ತಿಯಲ್ಲಿ ಬಂದೂಕಿನಿಂದ ಕಾಡುಕೋಣವನ್ನು ಬೇಟೆಯಾಡಿ, ಮಾಂಸವನ್ನು ಇಕೋ ಕಾರಿನಲ್ಲಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಕೊಯನಾಡು ಅರಣ್ಯ ಇಲಾಖೆ ಸಿಬ್ಬಂದಿಗಳು ಆಗಸ್ಟ್ 5ರಂದು ಕಲ್ಲುಗುಂಡಿಯ ಕೈಪಡ್ಕ ಬಳಿ ಬಂಧಿಸಿದ್ದಾರೆ. ದಾಳಿಯ ವೇಳೆ ಕಾರು, ಬಂದೂಕು ಹಾಗೂ ಮಾಂಸವನ್ನು ವಶಪಡಿಸಿಕೊಳ್ಳಲಾಗಿದ್ದು, ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.


ಕಲ್ಲುಗುಂಡಿ / ಮಡಿಕೇರಿ:ಕೊಡಗು ಜಿಲ್ಲೆಯ ಕೊಯನಾಡು ಅರಣ್ಯ ವಲಯ ವ್ಯಾಪ್ತಿಯ ಚೆಂಬು ಅರಣ್ಯದಲ್ಲಿ ಕಾಡುಕೋಣವನ್ನು ಕೋವಿಯಿಂದ ಬೇಟೆಯಾಡಿ, ಹತ್ಯೆ ಮಾಡಿ ಮಾಂಸ ಸಾಗಿಸುತ್ತಿದ್ದ ಜಾಲ ಒಂದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಭೇದಿಸಿದ್ದಾರೆ.
ಆಗಸ್ಟ್ 5ರಂದು ನಡೆಸಿದ ಚುರುಕಿನ ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳನ್ನು ಮಾಂಸ, ಬಂದೂಕು ಹಾಗೂ ಕಾರು ಸಮೇತ ವಶಕ್ಕೆ ಪಡೆಯಲಾಗಿದೆ.
ಬಂಧಿತ ಆರೋಪಿಗಳನ್ನು ಚೆಂಬು ನಿವಾಸಿ ಗೌತಮ್ ಹಾಗೂ ಪೆರಾಜೆ ನಿವಾಸಿ ಶರತ್ ಎಂದು ಗುರುತಿಸಲಾಗಿದೆ. ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಕಾಡುಪಂಜ ನಿವಾಸಿ ಯತಿನ್ ಎಂಬಾತ ಸ್ಥಳದಿಂದ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಅರಣ್ಯ ಇಲಾಖೆ ಶೋಧ ಕಾರ್ಯ ಚುರುಕುಗೊಳಿಸಿದೆ.
ಇಕೋ ಕಾರಿನಲ್ಲಿ ಮಾಂಸ ಸಾಗಾಟ – ಕೈಪಡ್ಕದಲ್ಲಿ ಅಡ್ಡಗಟ್ಟಿದ ಅರಣ್ಯ ಸಿಬ್ಬಂದಿ: ಆರೋಪಿಗಳು ಕೊಡಗು ವ್ಯಾಪ್ತಿಗೆ ಒಳಪಡುವ ಚೆಂಬು ಅರಣ್ಯ ವಲಯದ ಕಾಡುಪಂಜ ಎಂಬಲ್ಲಿ ಕಾಡುಕೋಣವನ್ನು ಕೋವಿಯಿಂದ (ಬಂದೂಕು) ಶೂಟ್ ಮಾಡಿ ಹತ್ಯೆ ಮಾಡಿದ್ದರು. ಬಳಿಕ ಆ ಮಾಂಸವನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಕಟ್ಟಿ, ‘KA 12’ ರಿಜಿಸ್ಟ್ರೇಷನ್ ಹೊಂದಿದ್ದ ಇಕೋ ಕಾರಿನಲ್ಲಿ ಸಾಗಿಸುತ್ತಿದ್ದರು.


ಈ ಕುರಿತು ಖಚಿತ ಮಾಹಿತಿ ಲಭಿಸುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಕೊಯನಾಡು ಅರಣ್ಯ ಇಲಾಖೆ ತಂಡವು ಕಲ್ಲುಗುಂಡಿಯ ಕೈಪಡ್ಕ ಎಂಬಲ್ಲಿ ಕಾರನ್ನು ಅಡ್ಡಗಟ್ಟಿ ಪರಿಶೀಲಿಸಿದೆ. ಈ ವೇಳೆ ಕಾರಿನಲ್ಲಿದ್ದ ಕಾಡುಕೋಣದ ಮಾಂಸ, ಬೇಟೆಗೆ ಬಳಸಿದ್ದ ಕೋವಿ (ಬಂದೂಕು) ಹಾಗೂ ಇಕೋ ಕಾರನ್ನು ಜಪ್ತಿ ಮಾಡಿ, ಇಬ್ಬರನ್ನು ಸ್ಥಳದಲ್ಲೇ ಬಂಧಿಸಲಾಗಿದೆ.
ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಸೆಂದಿಲ್ ಕುಮಾರ್ (IFS), ವಲಯ ಅರಣ್ಯಾಧಿಕಾರಿ ಶ್ರೀಮತಿ ಡಿನ್ಸಿ ದೇಚಮ್ಮ, ಉಪ ವಲಯ ಅರಣ್ಯಾಧಿಕಾರಿ ಶ್ರೀಮತಿ ಶ್ರೀರಕ್ಷಾ, ಅಧಿಕಾರಿಗಳಾದ ಸುರೇಶ್, ಸಂದೀಪ್ ಗೌಡ, ವಿಜೇಂದ್ರ ಕುಮಾರ್ ಹಾಗೂ ವಿನಯ ಕೃಷ್ಣ ಪಾಲ್ಗೊಂಡಿದ್ದರು.
ಅಲ್ಲದೆ, ಸಂಪಾಜೆ ವಲಯದ ಗಸ್ತು ಅರಣ್ಯ ಪಾಲಕರಾದ ಯಮನೂರಿ ಕೊಳೂರು, ಕಾರ್ತಿಕ್ ಡಿ., ಸಿದ್ದೇಶ್, ನಾಗರಾಜ್ ಎಸ್., ಸಿದ್ರಾಮ್ ನಾಟಿಕಾರ್, ಶ್ರೀಕಾಂತ್ ಬಿರಾದಾರ್ ಹಾಗೂ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
