
ಮುಂಬರುವ ಪ್ರಮುಖ ಹಬ್ಬಗಳ ಸಂದರ್ಭದಲ್ಲಿ ಸಾರ್ವಜನಿಕ ಶಾಂತಿ, ಸುವ್ಯವಸ್ಥೆ ಕಾಪಾಡುವ ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಕಡಬ ಪೊಲೀಸ್ ಠಾಣಾ ಅಧಿಕಾರಿಗಳು, ಸಿಬ್ಬಂದಿ ಹಾಗೂ ಆಂಟಿ ಕಮ್ಯೂನಲ್ ಫೋರ್ಸ್ (ACF) ಸಹಯೋಗದಲ್ಲಿ ಕಡಬ ಪಟ್ಟಣದಲ್ಲಿ ಆಕರ್ಷಕ ಪಥಸಂಚಲನ (ರೂಟ್ ಮಾರ್ಚ್) ನಡೆಸಲಾಯಿತು.


ಕಡಬ: ಮುಂಬರುವ ಸಾಲು ಸಾಲು ಹಬ್ಬ-ಹರಿದಿನಗಳ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ಸುರಕ್ಷತಾ ಭಾವನೆ ಮೂಡಿಸಲು, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಕಡಬ ಪೇಟೆಯಲ್ಲಿ ಪೊಲೀಸ್ ಇಲಾಖೆ ಹಾಗೂ ಆಂಟಿ ಕಮ್ಯೂನಲ್ ಫೋರ್ಸ್ (Anti Communal Force – ACF) ವತಿಯಿಂದ ಜಂಟಿಯಾಗಿ ಭರ್ಜರಿ ಪಥಸಂಚಲನ (ರೂಟ್ ಮಾರ್ಚ್) ನಡೆಯಿತು.
ಹಬ್ಬಗಳ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು, ಕೋಮು ಪ್ರಚೋದನೆ ಅಥವಾ ಕಾನೂನು ಉಲ್ಲಂಘನೆಗಳು ನಡೆಯದಂತೆ ತಡೆಯಲು ಈ ಕವಾಯತು ಹಮ್ಮಿಕೊಳ್ಳಲಾಗಿತ್ತು. ಕಡಬ ಪಟ್ಟಣದ ಪ್ರಮುಖ ರಸ್ತೆಗಳು, ವೃತ್ತಗಳು, ಬಸ್ ನಿಲ್ದಾಣ ಪರಿಸರ ಹಾಗೂ ಸೂಕ್ಷ್ಮ ಪ್ರದೇಶಗಳ ಮೂಲಕ ಶಿಸ್ತುಬದ್ಧವಾಗಿ ಪಥಸಂಚಲನ ನಡೆಸಿದ ಭದ್ರತಾ ಪಡೆಗಳು, ಸಾರ್ವಜನಿಕರಲ್ಲಿ ಕಾನೂನು ವ್ಯವಸ್ಥೆಯ ಬಗ್ಗೆ ವಿಶ್ವಾಸ ಹಾಗೂ ಧೈರ್ಯ ತುಂಬಿದವು.


ಅಧಿಕಾರಿಗಳು & ಸಿಬ್ಬಂದಿ ಭಾಗಿ: ಈ ಪಥಸಂಚಲನದಲ್ಲಿ ಕಡಬ ಪೊಲೀಸ್ ಠಾಣಾಧಿಕಾರಿಗಳು, ಠಾಣೆಯ ಎಎಸ್ಐಗಳು, ಮುಖ್ಯ ಪೇದೆಗಳು, ಸಿಬ್ಬಂದಿಗಳು ಹಾಗೂ ಆಂಟಿ ಕಮ್ಯೂನಲ್ ಫೋರ್ಸ್ನ ಸಶಸ್ತ್ರ ಪಡೆಯ ಸಿಬ್ಬಂದಿಗಳು ಸಂಪೂರ್ಣ ಸಮವಸ್ತ್ರ ಹಾಗೂ ಶಸ್ತ್ರಾಸ್ತ್ರಗಳೊಂದಿಗೆ ಭಾಗವಹಿಸಿದ್ದರು.
ಸಾರ್ವಜನಿಕರು ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡದೆ ಶಾಂತಿಯುತವಾಗಿ ಹಬ್ಬಗಳನ್ನು ಆಚರಿಸಬೇಕು ಹಾಗೂ ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಈ ಸಂದರ್ಭದಲ್ಲಿ ಪೊಲೀಸರು ಕರೆ ನೀಡಿದರು.
