
ಕಡಬ: ಕಡಬ ತಾಲೂಕಿನ ಬಲ್ಯ ಗ್ರಾಮದ ಹೊಸಮಠ ಎಂಬಲ್ಲಿಂದ ಕೊಕ್ಕಡಕ್ಕೆ ಔಷಧಿ ತರಲು ಹೋದ 23 ವರ್ಷದ ಯುವತಿಯೊಬ್ಬರು ಮನೆಗೆ ಮರಳದೆ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.


ನಾಪತ್ತೆಯಾದ ಯುವತಿಯನ್ನು ಹೊಸಮಠ ನಿವಾಸಿ ಐಶ್ವರ್ಯ (23) ಎಂದು ಗುರುತಿಸಲಾಗಿದೆ. ಯುವತಿಯ ತಂದೆ ತಿಮ್ಮಪ್ಪ (65) ಅವರು ನೀಡಿದ ಅಧಿಕೃತ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡಬ ತಾಲೂಕಿನ ಬಂಟ್ರ ಗ್ರಾಮದ ನೀರಾಜೆ ಮನೆ ನಿವಾಸಿ, ವೃತ್ತಿಯಲ್ಲಿ ಕೂಲಿ ಕಾರ್ಮಿಕರಾಗಿರುವ ತಿಮ್ಮಪ್ಪ ಅವರು ತಮ್ಮ ಹೆಂಡತಿ ಮತ್ತು ಮಕ್ಕಲೊಂದಿಗೆ ವಾಸವಾಗಿದ್ದರು. ಇವರೆಲ್ಲರೂ ಒಟ್ಟಿಗೆ ಹೊಸಮಠ ಎಂಬಲ್ಲಿಗೆ ಪ್ರತಿನಿತ್ಯ ಕೆಲಸಕ್ಕೆ ಹೋಗುತ್ತಿದ್ದರು. ಜುಲೈ 2 ರಂದು ಗುರುವಾರದಂದು ಬೆಳಗ್ಗೆ ಎಂದಿನಂತೆ ಎಲ್ಲರೂ ಕೆಲಸಕ್ಕೆ ತೆರಳಿದ್ದರು.
ಬೆಳಗ್ಗೆ ಐಶ್ವರ್ಯ ಅವರು “ಮನೆಗೆ ಹೋಗಿ ಬರುತ್ತೇನೆ” ಎಂದು ಹೇಳಿ ಕೆಲಸದ ಸ್ಥಳದಿಂದ ತೆರಳಿದ್ದರು. ತದನಂತರ ಮಧ್ಯಾಹ್ನ ಮತ್ತೆ ಕೆಲಸ ಮಾಡುವ ಜಾಗಕ್ಕೆ ವಾಪಸ್ ಬಂದ ಐಶ್ವರ್ಯ, ಕೈಯಲ್ಲಿ ಬ್ಯಾಗ್ ಹಿಡಿದುಕೊಂಡು “ನಾನು ಕೊಕ್ಕಡಕ್ಕೆ ಔಷಧಿ ತರಲು ಹೋಗಿ ಬರುತ್ತೇನೆ” ಎಂದು ತಂದೆ-ತಾಯಿಗೆ ಹೇಳಿ ಹೊರಟು ಹೋಗಿದ್ದಾಳೆ.


ಮೊಬೈಲ್ ಸ್ವಿಚ್ ಆಫ್ : ಕೊಕ್ಕಡಕ್ಕೆ ಹೋದ ಐಶ್ವರ್ಯ ರಾತ್ರಿಯಾದರೂ ಮನೆಗೆ ಮರಳಿ ಬಂದಿಲ್ಲ. ಇದರಿಂದ ಆತಂಕಗೊಂಡ ತಂದೆ ಮಗಳ ಮೊಬೈಲ್ ಫೋನ್ಗೆ ಕರೆ ಮಾಡಿದಾಗ ಆಕೆಯ ಫೋನ್ ‘ಸ್ವಿಚ್ ಆಫ್’ ಆಗಿರುವುದು ಕಂಡುಬಂದಿದೆ. ತಕ್ಷಣವೇ ಹೆತ್ತವರು ಹಾಗೂ ಕುಟುಂಬಸ್ಥರು ತಮಗೆ ಆಪ್ತರಾದ ಎಲ್ಲಾ ಸಂಬಂಧಿಕರ ಮನೆಗಳಲ್ಲಿ, ಸ್ನೇಹಿತರ ಬಳಿ ಹಾಗೂ ಆಕೆ ಹೋಗಬಹುದಾದ ಸಂಭಾವ್ಯ ಸ್ಥಳಗಳಲ್ಲಿ ವ್ಯಾಪಕವಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ಐಶ್ವರ್ಯ ಎಲ್ಲೂ ಹೋಗದಿರುವುದು ಮತ್ತು ಯಾವುದೇ ಸುಳಿವು ಸಿಗದೇ ಇರುವುದರಿಂದ ಅಂತಿಮವಾಗಿ ಕುಟುಂಬಸ್ಥರು ಕಡಬ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಕಡಬ ಠಾಣೆಯಲ್ಲಿ ಎಫ್ಐಆರ್ ದಾಖಲು:ಮಗಳು ಕಾಣೆಯಾದ ಬಗ್ಗೆ ಜುಲೈ 4ರಂದು ನೀಡಿದ ಲಿಖಿತ ದೂರಿನ ಅನ್ವಯ ಕಡಬ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 82/2026 ರಂತೆ ಭಾರತೀಯ ನ್ಯಾಯ ಸಂಹಿತೆ (BNS-2023)ಯ ವ್ಯಕ್ತಿ ಕಾಣೆಯಾಗಿದೆ (U/S 00MP) ನಿಯಮಾವಳಿಯಡಿ ಮೊಕದ್ದಮೆ ದಾಖಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕಾಣೆಯಾಗಿರುವ 23 ವರ್ಷದ ಯುವತಿ ಐಶ್ವರ್ಯ ಅವರ ಕುರಿತು ಯಾರಿಗಾದರೂ ಮಾಹಿತಿ ಅಥವಾ ಸುಳಿವು ಲಭ್ಯವಾದಲ್ಲಿ ತಕ್ಷಣ ಕಡಬ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.
