ಇಬ್ಬರ ವಿರುದ್ದ ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡ ಕಡಬ ಪೊಲೀಸರು

kadaba times

ಕಡಬ: ನಕಲಿ ಚಿನ್ನಾಭರಣಗಳನ್ನು ಅಸಲಿ ಎಂದು ನಂಬಿಸಿ, ವಿವಿಧ ಬ್ಯಾಂಕ್‌ಗಳಲ್ಲಿ ಅಡವಿಟ್ಟು ಹಣ ಪಡೆದು ವಂಚಿಸಲು ಯತ್ನಿಸುತ್ತಿದ್ದ ಇಬ್ಬರನ್ನು ಕಡಬ ಠಾಣೆಯ ಪೊಲೀಸರು ಅತ್ಯಂತ ಚಾಣಾಕ್ಷತನದಿಂದ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.

kadaba times
uniq

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು, ಪೊಲೀಸರು ಆರೋಪಿಗಳಿಂದ ತೂಕ ಹೆಚ್ಚಿಸಲು ಬೇರೆ ಲೋಹ ಮಿಶ್ರಣ ಮಾಡಲಾಗಿದ್ದ ಸುಮಾರು 120 ಗ್ರಾಂ ನಕಲಿ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಘಟನೆಯ ಹಿನ್ನೆಲೆ:

ಜುಲೈ 4 ರಂದು ಸಂಜೆ ಕಡಬ ಪೇಟೆಯಲ್ಲಿ ಗುಪ್ತ ಮಾಹಿತಿ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ಸ್ಟೇಬಲ್ ಮಹೇಶ್ (ಪಿಸಿ 431) ಅವರಿಗೆ ಇಬ್ಬರು ವ್ಯಕ್ತಿಗಳು ಸಂಶಯಾಸ್ಪದವಾಗಿ ವಿವಿಧ ಬ್ಯಾಂಕುಗಳಿಗೆ ಓಡಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಲಭ್ಯವಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಮಹೇಶ್ ಅವರು ಕಡಬ ಬಸ್ ನಿಲ್ದಾಣದ ಬಳಿ ಸಂಶಯಾಸ್ಪದವಾಗಿ ನಿಂತಿದ್ದ ಇಬ್ಬರನ್ನು ತಡೆದು ವಿಚಾರಣೆ ನಡೆಸಿದರು.

ವಿಚಾರಣೆಯ ವೇಳೆ ಆರೋಪಿಗಳು ತಮ್ಮ ಹೆಸರು ಮತ್ತು ವಿಳಾಸವನ್ನು ಸರಿಯಾಗಿ ಹೇಳದೆ, ಒಮ್ಮೆ ಬಂಟ್ವಾಳ, ಇನ್ನೊಮ್ಮೆ ಉಪ್ಪಿನಂಗಡಿ ಎಂದು ಹೇಳುತ್ತಾ ಪೊಲೀಸರನ್ನು ದಾರಿ ತಪ್ಪಿಸಲು ಯತ್ನಿಸಿದ್ದಾರೆ. ಮತ್ತಷ್ಟು ತೀವ್ರವಾಗಿ ಪ್ರಶ್ನಿಸಿದಾಗ, ತಮ್ಮ ಬಳಿ 120 ಗ್ರಾಂ ಚಿನ್ನವಿದ್ದು ಅದನ್ನು ಬ್ಯಾಂಕಿನಲ್ಲಿ ಅಡವಿಡಲು ಬಂದಿರುವುದಾಗಿ ಒಪ್ಪಿಕೊಂಡಿದ್ದಾರೆ. ಆದರೆ ಆ ಚಿನ್ನಕ್ಕೆ ಸಂಬಂಧಿಸಿದ ಯಾವುದೇ ರಶೀದಿ ಅಥವಾ ಸೂಕ್ತ ದಾಖಲೆಗಳು ಅವರ ಬಳಿ ಇರಲಿಲ್ಲ.“ಆರೋಪಿಗಳು ತಂದಿದ್ದ ಆಭರಣಗಳು ಅತಿಯಾದ ಭಾರ ಹೊಂದಿದ್ದವು. ಪ್ರಾಥಮಿಕ ತಪಾಸಣೆಯಲ್ಲಿ ಅದಕ್ಕೆ ಯಾವುದೋ ಬೇರೆ ಮೆಟಲ್ (ಲೋಹ) ಸೇರಿಸಿ ಹೆಚ್ಚು ತೂಕ ಬರುವಂತೆ ಮಾಡಿರುವುದು ಬೆಳಕಿಗೆ ಬಂದಿದೆ. ಬ್ಯಾಂಕ್‌ಗಳಿಗೆ ಮೋಸ ಮಾಡಿ ಹಣ ಗಳಿಸುವ ಉದ್ದೇಶದಿಂದಲೇ ಇವರು ಬಂದಿದ್ದರು” ಎಂದು ಪೊಲೀಸರು ತಿಳಿಸಿದ್ದಾರೆ.

kadaba times
kadaba times

ಠಾಣೆಗೆ ಕರೆತಂದು ಕಡಬ ಪೊಲೀಸ್ ಉಪನಿರೀಕ್ಷಕರಾದ (PSI) ಜಂಬುರಾಜ್ ಮಹಾಜನ್ ಅವರು ತನಿಖೆ ನಡೆಸಿದಾಗ ಆರೋಪಿಗಳ ಅಸಲಿ ಮುಖವಾಡ ಕಳಚಿದೆ. ಬಂಧಿತರನ್ನು ಮಹಮ್ಮದ್ ಫಾಯಿಝ್ (20 ವರ್ಷ): ಕೆರೆಮೂಲೆ  ಉಪ್ಪಿನಂಗಡಿ ಗ್ರಾಮ ಮತ್ತು ಮೊಹಮ್ಮದ್ ಮುರ್ಷೀದ್ (45 ವರ್ಷ):  ಕೆಳಗಿನ ಪೇಟೆ ಮನೆ, ಬಂಟ್ವಾಳ ಕಸಬಾ ಎಂದು ಗುರುತಿಸಲಾಗಿದೆ.

ಪೊಲೀಸರಿಂದಲೇ ಸ್ವಯಂಪ್ರೇರಿತ (Suomoto) ಪ್ರಕರಣ ದಾಖಲು:

ಆರೋಪಿಗಳು ಬ್ಯಾಂಕ್‌ಗಳಿಗೆ ವಂಚಿಸುವ ಉದ್ದೇಶದಿಂದಲೇ ನಕಲಿ ಚಿನ್ನ ತಂದಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ, ಕಡಬ ಪಿಎಸ್‌ಐ ಜಂಬುರಾಜ್ ಮಹಾಜನ್ ಅವರೇ ಸ್ವಯಂಪ್ರೇರಿತರಾಗಿ (Suomoto) ದೂರು ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 83/2026 ರಂತೆ, ಭಾರತೀಯ ನ್ಯಾಯ ಸಂಹಿತೆ (BNS)-2023 ರ ಕಲಂ 318(4) (ವಂಚನೆ) ಮತ್ತು 62 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪೊಲೀಸರು ಮುಂದಿನ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಕಡಬ ಪೊಲೀಸರ ಈ ಸಮಯಪ್ರಜ್ಞೆಯಿಂದಾಗಿ ಬ್ಯಾಂಕ್‌ಗಳಿಗೆ ಆಗಬಹುದಾಗಿದ್ದ ದೊಡ್ಡ ಮಟ್ಟದ ವಂಚನೆಯೊಂದು ತಪ್ಪಿದಂತಾಗಿದೆ.

KADABA TIMES NEWS
KADABA TIMES NEWShttps://kadabatimes.in
ಕಡಬ ಟೈಮ್ಸ್ ಒಂದು ಸ್ವತಂತ್ರ ಮಾಧ್ಯಮವಾಗಿದ್ದು ಕಡಬ ತಾಲೂಕು ಕೇಂದ್ರಿತ ಸುದ್ದಿಗಳಿಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತಿದೆ. ಇದರ ಜೊತೆಗೆ ದ.ಕ ಜಿಲ್ಲೆಯ ಪ್ರಮುಖ ಸುದ್ದಿಗಳು, ರಾಜ್ಯ,ದೇಶದ ಮಹತ್ವದ ಘಟನಾವಳಿಗಳನ್ನು ಸ್ಥಳೀಯರಿಗೆ ತಲುಪಿಸುತ್ತದೆ. ನಮ್ಮನ್ನು ಬೆಂಬಲಿಸಿ ಮತ್ತು ಪ್ರೋತ್ಸಾಹಿಸಿ. ನಿಮ್ಮೂರಿನ ಸುದ್ದಿ ಮಾಹಿತಿಗಳನ್ನು +91 93804 74819 ಗೆ ವಾಟ್ಸಪ್ ಮಾಡಿ.

Related Articles

Latest Articles