
ಮಂಗಳೂರು (ಸುರತ್ಕಲ್): ರಾತ್ರಿ ಜೊತೆಯಾಗಿ ಮಲಗಿದ್ದ ಸ್ವಂತ ತಮ್ಮನ ತಲೆಗೆ ಕಲ್ಲು ಎತ್ತಿಹಾಕಿ ಅಣ್ಣನೇ ಅತ್ಯಂತ ಭೀಕರವಾಗಿ ಕೊಲೆ ಮಾಡಿರುವ ಘಟನೆ ಮಂಗಳೂರಿನ ಸುರತ್ಕಲ್ ಸಮೀಪದ ಚೊಕ್ಕಬೆಟ್ಟು ಮಠದ ಬಳಿ ರವಿವಾರ ತಡರಾತ್ರಿ ನಡೆದಿದೆ.


ಕೊಲೆಯಾದ ದುರ್ದೈವಿಯನ್ನು ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತೆಗ್ಯಾಳು ಗ್ರಾಮದ ನಿವಾಸಿ, ಸದ್ಯ ಚೊಕ್ಕಬೆಟ್ಟು ಮಠದ ಬಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಮಲ್ಲಿಕಾರ್ಜುನ (20) ಎಂದು ಗುರುತಿಸಲಾಗಿದೆ. ಈತನ ಸ್ವಂತ ಅಣ್ಣ ಸೋಮನಾಥ್ (21) ಕೊಲೆಗೈದ ಆರೋಪಿ ಎನ್ನಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮನೆಯಲ್ಲಿ ಇಬ್ಬರು ಸಹೋದರರು ತಮ್ಮ ತಾಯಿಯೊಂದಿಗೆ ವಾಸವಾಗಿದ್ದರು. ಆದರೆ ತಾಯಿ ಇತ್ತೀಚೆಗಷ್ಟೇ ಕೊಪ್ಪಳದಲ್ಲಿದ್ದ ತಮ್ಮ ಸ್ವಂತ ಊರಿಗೆ ತೆರಳಿದ್ದರು. ಘಟನೆ ನಡೆದ ರವಿವಾರ ರಾತ್ರಿ ಸಹೋದರರಿಬ್ಬರೇ ಮನೆಯಲ್ಲಿ ಮಲಗಿದ್ದರು.ಸೋಮವಾರ ಬೆಳಿಗ್ಗೆ ನಿದ್ದೆಯಿಂದ ಎದ್ದ ಸೋಮನಾಥ್, ನೆರೆಮನೆಯವರ ಬಳಿ ಹೋಗಿ “ನನ್ನ ತಮ್ಮ ಮಲಗಿದ್ದಲ್ಲಿಂದ ಏಳುತ್ತಿಲ್ಲ” ಎಂದು ಕಥೆ ಕಟ್ಟಿದ್ದಾನೆ. ಅನುಮಾನಗೊಂಡ ನೆರೆಮನೆಯವರು ತಕ್ಷಣವೇ ಮನೆಯ ಮಾಲಕಿ ರೇಖಾ ಅವರಿಗೆ ಮಾಹಿತಿ ನೀಡಿದ್ದಾರೆ. ಮಾಲಕಿ ರೇಖಾ ಅವರು ಸುರತ್ಕಲ್ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಮಲ್ಲಿಕಾರ್ಜುನ ಮಲಗಿದ್ದಲ್ಲಿಯೇ ಆತನ ತಲೆಗೆ ಭಾರವಾದ ಕಲ್ಲು ಎತ್ತಿಹಾಕಿ ರಕ್ತಸ್ರಾವದಿಂದ ಕೊಲೆ ಮಾಡಲಾಗಿರುವುದು ಬೆಳಕಿಗೆ ಬಂದಿದೆ.


ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸುರತ್ಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಮಂಗಳೂರು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಮಿಥುನ್ ಎಚ್.ಎನ್., ಪಣಂಬೂರು ಉಪ ವಿಭಾಗದ ಎಸಿಪಿ ಶ್ರೀಕಾಂತ್, ಸುರತ್ಕಲ್ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್, ಶ್ವಾನದಳ, ಬೆರಳಚ್ಚು ತಜ್ಞರು ಹಾಗೂ ವಿಧಿವಿಜ್ಞಾನ ತಜ್ಞರ (FSL) ತಂಡ ಭೇಟಿ ನೀಡಿ ಸಾಕ್ಷ್ಯಾಧಾರಗಳನ್ನು ಕಲೆಹಾಕಿದೆ.
ಕೊಲೆಗೆ ನಿಖರವಾದ ಕಾರಣ ಏನೆಂಬುದು ಇನ್ನು ತಿಳಿದುಬಂದಿಲ್ಲ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸೋಮನಾಥ್ನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
