ಕುಕ್ಕೆ ಸುಬ್ರಹ್ಮಣ್ಯ ಬಸ್ ನಿಲ್ದಾಣದಲ್ಲಿ ಶುಚಿತ್ವದ ಕೊರತೆ: ಜಾನುವಾರುಗಳ ಹಾವಳಿ ,ಎಲ್ಲೆಂದರಲ್ಲಿ ಕಸದ ರಾಶಿ!

kadaba times

ಸುಬ್ರಹ್ಮಣ್ಯ, ಜು. 22: ರಾಜ್ಯದ ಪ್ರಸಿದ್ಧ ನಾಗಾರಾಧನಾ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪವಿರುವ ಮುಖ್ಯ ಬಸ್ ನಿಲ್ದಾಣದಲ್ಲಿ ಸಮರ್ಪಕ ಸ್ವಚ್ಛತೆ ಮತ್ತು ಶುಚಿತ್ವದ ಕೊರತೆ ಕಂಡುಬಂದಿದ್ದು, ಪ್ರಯಾಣಿಕರು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

kadaba times
uniq

ರಾತ್ರಿ ವೇಳೆಯಿಂದ ಬೆಳಗಿನ ಜಾವದವರೆಗೆ ಬಸ್ ನಿಲ್ದಾಣದಲ್ಲಿ ಜಾನುವಾರುಗಳ ಹಾವಳಿ ಹೆಚ್ಚಾಗಿದ್ದು, ಕಸ ಸಂಗ್ರಹಿಸಲು ಇರಿಸಲಾಗಿರುವ ಟಬ್ಬುಗಳನ್ನು ಜಾನುವಾರುಗಳು ಉರುಳಿಸಿ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಹರಡುತ್ತಿರುವುದು ಕಂಡುಬಂದಿದೆ. ಪ್ಲಾಸ್ಟಿಕ್, ಆಹಾರದ ಅವಶೇಷಗಳು ಹಾಗೂ ಇತರ ತ್ಯಾಜ್ಯಗಳು ಬಸ್ ನಿಲ್ದಾಣದ ಆವರಣದಲ್ಲೇ ಚೆಲ್ಲಾಪಿಲ್ಲಿಯಾಗಿದ್ದು, ಬೆಳಗಿನ ಜಾವ ಪ್ರಯಾಣಿಕರು ದುರ್ವಾಸನೆಯ ನಡುವೆ ಮೂಗು ಮುಚ್ಚಿಕೊಂಡೇ ಬಸ್ ಹತ್ತಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಕುರಿತು ಬಸ್ ನಿಲ್ದಾಣದ ಸಿಬ್ಬಂದಿಯನ್ನು ಸಾರ್ವಜನಿಕರು ಪ್ರಶ್ನಿಸಿದಾಗ, ರಾತ್ರಿ ವೇಳೆಯಲ್ಲಿ ಭದ್ರತಾ ಸಿಬ್ಬಂದಿ (ಸೆಕ್ಯೂರಿಟಿ ಗಾರ್ಡ್) ಇಲ್ಲದಿರುವುದರಿಂದ ಜಾನುವಾರುಗಳು ನಿರ್ಬಂಧವಿಲ್ಲದೆ ಬಸ್ ನಿಲ್ದಾಣ ಪ್ರವೇಶಿಸಿ ಈ ರೀತಿಯ ಸಮಸ್ಯೆ ಉಂಟಾಗುತ್ತಿದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

kadaba times
kadaba times

ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ರಾತ್ರಿ ವೇಳೆಗೆ ಭದ್ರತಾ ಸಿಬ್ಬಂದಿಯನ್ನು ನೇಮಿಸುವುದರ ಜೊತೆಗೆ, ದಿನದ 24 ಗಂಟೆಯೂ ಸ್ವಚ್ಛತೆ ಕಾಪಾಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪ್ರತಿದಿನ ಸಾವಿರಾರು ಭಕ್ತರು ಹಾಗೂ ಪ್ರಯಾಣಿಕರು ಸಂಚರಿಸುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಪ್ರಮುಖ ಬಸ್ ನಿಲ್ದಾಣದಲ್ಲೇ ಇಂತಹ ದುಸ್ಥಿತಿ ಕಂಡುಬರುತ್ತಿರುವುದು ಸ್ಥಳೀಯ ಆಡಳಿತ ಮತ್ತು ಸಂಬಂಧಪಟ್ಟ ಇಲಾಖೆಗಳ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕೂಡಲೇ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ ಬಸ್ ನಿಲ್ದಾಣವನ್ನು ಸ್ವಚ್ಛ ಹಾಗೂ ಸುರಕ್ಷಿತವಾಗಿಡುವಂತೆ ಒತ್ತಾಯಿಸಿದ್ದಾರೆ.

Related Articles

Latest Articles