
ಬಿಳಿಯಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಸಂತೋಷ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬೈಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಡಿಕ್ಕಿಯಿಂದ ತಲೆಗೆ ತೀವ್ರ ಗಾಯವಾಗಿತ್ತು. ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸದೆ ಜುಲೈ 22ರಂದು ರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ.


ದಕ್ಷಿಣ ಕನ್ನಡ ಜಿಲ್ಲೆಯ ಬಿಳಿಯಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರನ್ನು ಬಿಳಿಯಾರು ನಿವಾಸಿ ಸುಬ್ರಾಯ ನಾಯ್ಕ್ ಅವರ ಪುತ್ರ ಸಂತೋಷ್ ಎಂದು ಗುರುತಿಸಲಾಗಿದೆ. ಜುಲೈ 22ರಂದು ರಾತ್ರಿ ಈ ದುರ್ಘಟನೆ ನಡೆದಿದೆ.
ಲಭ್ಯವಿರುವ ಮಾಹಿತಿಯ ಪ್ರಕಾರ, ಸಂತೋಷ್ ಅವರು ಬೈಕ್ನಲ್ಲಿ ಬಿಳಿಯಾರಿನಿಂದ ಸುಳ್ಯದತ್ತ ತೆರಳುತ್ತಿದ್ದರು. ಇದೇ ವೇಳೆ ಮಡಿಕೇರಿ ಕಡೆಯಿಂದ ಸುಳ್ಯದತ್ತ ಬರುತ್ತಿದ್ದ ಕಾರಿನೊಂದಿಗೆ ಬೈಕ್ ಡಿಕ್ಕಿಯಾಗಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗಳಾಗಿವೆ.


ಅಪಘಾತದ ತಕ್ಷಣ ಸ್ಥಳೀಯರು ಗಾಯಾಳುವಿನ ನೆರವಿಗೆ ಧಾವಿಸಿದ್ದಾರೆ. ಬಳಿಕ ಅರಂತೋಡಿನ ಸಮೃದ್ಧಿ ಆಂಬುಲೆನ್ಸ್ ಮೂಲಕ ಚಾಲಕ ಶರತ್ ಅವರು ಗಾಯಾಳುವನ್ನು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು.ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಗಾಯದ ತೀವ್ರತೆಯನ್ನು ಗಮನಿಸಿ ಹೆಚ್ಚಿನ ಚಿಕಿತ್ಸೆಗೆ ಕೆವಿಜಿ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಸೂಚಿಸಿದರು. ನಂತರ ಅವರನ್ನು ಕೆವಿಜಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಯಿತು.
