
ಕಡಬ: ಕ್ಷೇತ್ರದ ಅತ್ಯಂತ ಪ್ರಮುಖ ಸಂಪರ್ಕ ರಸ್ತೆಯಾಗಿರುವ ಕಡಬ-ಪಂಜ ರಸ್ತೆಯ ಅಭಿವೃದ್ಧಿ ಕಾಮಗಾರಿ ಇದೀಗ ಸಂಪೂರ್ಣವಾಗಿ ಹಳ್ಳ ಹಿಡಿದಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಗುತ್ತಿಗೆದಾರನ ನಿರಾಸಕ್ತಿಯಿಂದಾಗಿ ಸದ್ಯ ಡಾಂಬರು ಕೊರತೆಯ ನೆಪವೊಡ್ಡಿ ಕಾಮಗಾರಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ.


ಅತ್ಯಂತ ಆಶ್ಚರ್ಯಕರ ವಿಷಯವೆಂದರೆ, ಇತ್ತೀಚೆಗೆ ಸುರಿದ ಮಳೆಗೆ ಹೊಸದಾಗಿ ಹಾಕಲಾಗಿದ್ದ ಡಾಂಬರು ಎದ್ದು ಹೋಗಿ ದೊಡ್ಡ ಗುಂಡಿ ನಿರ್ಮಾಣವಾಗಿದ್ದು, ಅದಕ್ಕೆ ಸಿಮೆಂಟ್ ಮಿಶ್ರಣದ ತೇಪೆ (ಪ್ಯಾಚ್ ವರ್ಕ್) ಹಾಕಿ ಸಾರ್ವಜನಿಕರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಲಾಗಿದೆ.
ಅನುದಾನವಿದ್ದರೂ ಪ್ರಗತಿಯಿಲ್ಲ:
ಈ ರಸ್ತೆಯ ಸುಧಾರಣೆಗಾಗಿ ಮೊದಲ ಹಂತದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಕಡಬದಿಂದ ಕಲ್ಲಂತಡ್ಕದವರೆಗೆ ಅತೀ ಹೆಚ್ಚು ಹಾಳಾಗಿದ್ದ ಮೂರು ಪ್ರಮುಖ ಕಡೆಗಳಲ್ಲಿ ರಸ್ತೆಯನ್ನು ಎತ್ತರಿಸಿ ಕಾಂಕ್ರೀಟ್ ಅಳವಡಿಸಲಾಗಿತ್ತು. ಇದೀಗ ಎರಡನೇ ಹಂತದ ಕಾಮಗಾರಿಗಾಗಿ ಮತ್ತೊಂದು 1 ಕೋಟಿ ರೂ. ಮಂಜೂರಾಗಿದೆ.ಅದರಲ್ಲಿ ಮೊದಲ ಹಂತದ ಕೆಲಸ ಬಹುತೇಕ ಪೂರ್ಣಗೊಂಡಿದೆ, ಒಟ್ಟು 2 ಕೋಟಿ ರೂ.ಗಳ ಬೃಹತ್ ಅನುದಾನ ಲಭ್ಯವಿದ್ದರೂ, ಗುತ್ತಿಗೆದಾರನ ಬೇಜವಾಬ್ದಾರಿತನ ಹಾಗೂ ಲೋಕೋಪಯೋಗಿ ಇಲಾಖೆಯ (PWD) ಇಂಜಿನಿಯರ್ಗಳ ಕಣ್ಣುಮುಚ್ಚಾಲಾಟದಿಂದಾಗಿ ಕಾಮಗಾರಿ ಇಂಚೂ ಪ್ರಗತಿ ಕಾಣುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಸರ್ಕಾರದಿಂದ ಹಣ ಬಿಡುಗಡೆಯಾಗಿದ್ದರೂ ಗುತ್ತಿಗೆದಾರರು ನಿಗದಿತ ಅವಧಿಗೆ ಕೆಲಸ ಮಾಡುತ್ತಿಲ್ಲ. ಪ್ರತಿ ತಿಂಗಳು ಕನಿಷ್ಠ ಸುಮಾರು 28.26 ಲಕ್ಷ ರೂ.ಗಳಷ್ಟು ಪ್ರಗತಿ ಸಾಧಿಸಬೇಕೆಂದು ಇಲಾಖೆಯು ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ, ಪ್ರಸ್ತುತ ಕಾಮಗಾರಿ ಅರ್ಧಕ್ಕೆ ನಿಂತಿರುವುದರಿಂದ ಮಳೆಗಾಲದಲ್ಲಿ ಸಾರ್ವಜನಿಕರ ಹಾಗೂ ವಾಹನ ಸವಾರರ ಸಂಕಷ್ಟ ದುಪ್ಪಟ್ಟಾಗಿದೆ.


ನೋಟಿಸ್ ನೀಡದ ಅಧಿಕಾರಿಗಳು – ನಿಯಮಾವಳಿ ಉಲ್ಲಂಘನೆ:
ಸದ್ಯ ಕೆಲಸ ಸಂಪೂರ್ಣ ನಿಂತಿದ್ದರೂ, ಇಲಾಖೆಯ ಅಧಿಕಾರಿಗಳು ಗುತ್ತಿಗೆದಾರನಿಗೆ ಕನಿಷ್ಠ ಒಂದು ಕಾರಣ ಕೇಳಿ ನೋಟಿಸ್ ನೀಡುವ ಧೈರ್ಯವನ್ನೂ ತೋರಿಲ್ಲದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಗುತ್ತಿಗೆದಾರರಿಗೆ ನೀಡಲಾದ ಅಧಿಕೃತ ಬಿಲ್ ಆಫ್ ಕ್ವಾಂಟಿಟೀಸ್ (Bill of Quantities) ಪಟ್ಟಿಯ ಪ್ರಕಾರ ರಸ್ತೆ ಸುಧಾರಣೆಯೊಂದಿಗೆ ಸುಮಾರು 800 ರಷ್ಟು ರಸ್ತೆ ಬದಿಯ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು ಹಾಗೂ 4 ಹ್ಯೂಮ್ ಪೈಪ್ ಮೋರಿಗಳ ದುರಸ್ತಿ ಕಾರ್ಯ ನಡೆಸಬೇಕು.ರಸ್ತೆಯ ಆಳವಾದ ಮತ್ತು ಮೇಲ್ಪದರದ ಗುಂಡಿಗಳನ್ನು ಕಡ್ಡಾಯವಾಗಿ ಎಸ್ಡಿಬಿಸಿ (SDBC) ಮಿಶ್ರಣದಿಂದಲೇ ಮುಚ್ಚಬೇಕು.ವಾಹನ ಸವಾರರ ಸುರಕ್ಷತೆಗಾಗಿ 16 ಟ್ರಾಫಿಕ್ ಸೈನ್ ಬೋರ್ಡ್ಗಳು ಹಾಗೂ 3 ಪ್ರಮುಖ ಮಾರ್ಗದರ್ಶನ ಫಲಕಗಳನ್ನು (Signboards) ಅಳವಡಿಸಬೇಕು.ಕಾಮಗಾರಿಯ ಅಧಿಕೃತ ಆದೇಶದಲ್ಲಿ ರಸ್ತೆಯ ಎರಡೂ ಬದಿಯ ಚರಂಡಿಗಳನ್ನು ಸರಿಪಡಿಸಲು ಮತ್ತು ಮೋರಿ ಅಳವಡಿಸಲು ಸ್ಪಷ್ಟ ಉಲ್ಲೇಖವಿದ್ದರೂ, ಮಳೆಗಾಲ ಆರಂಭವಾದರೂ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ.
ಶಾಸಕರ ಭರವಸೆಯೂ ಹುಸಿ:
ಕಡಬದಿಂದ ಕೋಡಿಂಬಾಳದ ಓಂತ್ರಡ್ಕ ತನಕದ ರಸ್ತೆಯನ್ನು ಸಂಪೂರ್ಣವಾಗಿ ಸುಸಜ್ಜಿತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಸ್ಥಳೀಯ ಶಾಸಕರು ಸಾರ್ವಜನಿಕರಿಗೆ ಬಹಿರಂಗ ಭರವಸೆ ನೀಡಿದ್ದರು. ಆದರೆ ಈಗ ಶಾಸಕರ ಮಾತಿಗೂ ಬೆಲೆ ಇಲ್ಲದಂತಾಗಿದ್ದು, ವ್ಯವಸ್ಥೆ ಹದಗೆಟ್ಟಿದೆ. ಮಳೆಗಾಲದ ಭೀತಿ ಹೆಚ್ಚುತ್ತಿರುವುದರಿಂದ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು, ಕಾನೂನು ಕ್ರಮ ಕೈಗೊಂಡು ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕೆಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.
