
ಕಡಬ ತಾಲೂಕಿನ ಐತ್ತೂರು ಗ್ರಾಮದಲ್ಲಿ ಮದ್ಯಪಾನದ ಅಮಲಿನಲ್ಲಿ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿ, ಗ್ಯಾಸ್ ಸಿಲಿಂಡರ್ ತೆರೆದು ಕೊಲ್ಲುವುದಾಗಿ ಜೀವ ಬೆದರಿಕೆಯೊಡ್ಡಿದ ಘಟನೆಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಕಾನೂನು ಕ್ರಮ ಜರುಗಿಸಲಾಗಿದೆ


ಕಡಬ: ವಿಪರೀತ ಮದ್ಯಪಾನದ ಚಟಕ್ಕೆ ಬಿದ್ದ ಗಂಡನೊಬ್ಬ ವಿನಾಕಾರಣ ಶಂಕೆ ವ್ಯಕ್ತಪಡಿಸಿ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದಲ್ಲದೆ, ಆಕೆಯನ್ನು ಹಾಗೂ ತಡೆಯಲು ಬಂದ ತನ್ನ ಹೆತ್ತ ತಾಯಿಯ ಮೇಲೆಯೂ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ ಘಟನೆ ಕಡಬ ತಾಲೂಕಿನ ಐತ್ತೂರು ಗ್ರಾಮದಲ್ಲಿ ನಡೆದಿದೆ.
ಐತ್ತೂರು ಗ್ರಾಮದ ಕೈಕುರೆಯ ಶಿವರಾಮ (A1) ಎಂಬಾತನ ವಿರುದ್ಧ ಆತನ ಪತ್ನಿ ನೀಡಿದ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (ಅಪರಾಧ ಸಂಖ್ಯೆ: 95/2026) ದಾಖಲಾಗಿದೆ.
ಸಂತ್ರಸ್ತೆ 9 ವರ್ಷಗಳ ಹಿಂದೆ ವಿವಾಹವಾಗಿದ್ದು, ದಂಪತಿಗೆ 7 ವರ್ಷದ ಮಗನಿದ್ದಾನೆ. ಇತ್ತೀಚಿನ ದಿನಗಳಲ್ಲಿ ಪತಿ ವಿಪರೀತ ಮದ್ಯ ಸೇವನೆ ಮಾಡುತ್ತಿದ್ದು, ವಿನಾಕಾರಣ ಬೇರೆಯವರೊಂದಿಗೆ ಸಂಬಂಧ ಕಲ್ಪಿಸಿ ಮಾನಸಿಕ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ.


ಜುಲೈ 22 ರಂದು ರಾತ್ರಿಮದ್ಯಪಾನ ಮಾಡಿ ಮನೆಗೆ ಬಂದು ಪತ್ನಿಗೆ ಅಶ್ಲೀಲ ಪದಗಳಿಂದ ನಿಂದಿಸಿದ್ದಾನೆ. ಬಳಿಕ ಆಕೆಯ ಮೇಲೆ ಕೈಯಿಂದ ಹೊಡೆದು, ತಲೆಯನ್ನು ಗೋಡೆಗೆ ತಳ್ಳಿ ದೌರ್ಜನ್ಯವೆಸಗಿದ್ದಾನೆ. ಈ ವೇಳೆ ಸೊಸೆಯ ರಕ್ಷಣೆಗೆ ಧಾವಿಸಿದ ಅತ್ತೆ ಮೇಲೆಯೂ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಅಷ್ಟಕ್ಕೇ ನಿಲ್ಲಿಸದ ಆರೋಪಿ “ನಿಮ್ಮನ್ನು ಗ್ಯಾಸ್ ಸಿಲಿಂಡರ್ ಓಪನ್ ಮಾಡಿ ಕೊಲ್ಲುತ್ತೇನೆ” ಎಂದು ಕುಟುಂಬಸ್ಥರಿಗೆ ಪ್ರಾಣ ಬೆದರಿಕೆಯೊಡ್ಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ
ಹಲ್ಲೆಯಿಂದ ಗಾಯಗೊಂಡ ಆರೋಪಿಯ ಪತ್ನಿ ಕಡಬ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ನಂತರ ತಮ್ಮ ಹಾಗೂ ಬಾವನಿಗೆ ವಿಷಯ ತಿಳಿಸಿ ಕಡಬ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಕಡಬ ಪೊಲೀಸರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNS) ಕಾಯ್ದೆಯ ಕಲಂ 85, 115(2), 352, 351(3) ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ
