
ಇಚ್ಲಂಪಾಡಿ: ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ ನೇರ್ಲ ಎಂಬಲ್ಲಿ ಸೂಕ್ತ ಪರವಾನಗಿ ನವೀಕರಣ ಮಾಡದೆ ವ್ಯವಹಾರ ನಡೆಸುತ್ತಿದ್ದ ಆರೋಪದ ಮೇಲೆ ‘ಹೋಟೆಲನ್ನು ಕಡಬ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿ (EO) ನವೀನ್ ಭಂಡಾರಿ ಅವರು ಜುಲೈ 4ರ ಶನಿವಾರ ಸಂಜೆ ಅಧಿಕಾರಿಗಳೊಂದಿಗೆ ಧಾವಿಸಿ ಬಂದ್ ಮಾಡಿಸಿದ್ದಾರೆ. ಆದರೆ, ಯಾವುದೇ ಪೂರ್ವಭಾವಿ ಲಿಖಿತ ನೋಟಿಸ್ ನೀಡದೆ ಏಕಾಏಕಿ ಹೋಟೆಲ್ ಬಂದ್ ಮಾಡುತ್ತಿರುವುದಕ್ಕೆ ಹೋಟೆಲ್ ಮಾಲೀಕರು ಹಾಗೂ ಅವರ ಪರ ವಕೀಲರು ಸ್ಥಳದಲ್ಲೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಘಟನೆಯೂ ನಡೆದಿದೆ.


ಹಿನ್ನೆಲೆ ಹಾಗೂ ಪರವಾನಗಿ ವಿವಾದ:
ಇಚ್ಲಂಪಾಡಿ ಗ್ರಾಮದ ನೇರ್ಲ ನಿವಾಸಿ ಈಶ್ವರ ಗೌಡ ಎಂಬವರು ತಮ್ಮ ಜಾಗದಲ್ಲಿ ಪ್ರತ್ಯೇಕ ಕಟ್ಟಡ ನಿರ್ಮಿಸಿ, ನೂಜಿಬಾಳ್ತಿಲ ಗ್ರಾಮ ಪಂಚಾಯತ್ನಿಂದ ಪರವಾನಗಿ ಪಡೆದು ‘ಅಕ್ಷಯ’ ಹೆಸರಿನಲ್ಲಿ ಮಾಂಸಾಹಾರಿ ಹಾಗೂ ಸಸ್ಯಾಹಾರಿ ಹೋಟೆಲ್ ನಡೆಸುತ್ತಿದ್ದರು. ಇದಕ್ಕೆ ಆಹಾರ ಇಲಾಖೆಯ ಫುಡ್ ಸೇಫ್ಟಿ ಆ್ಯಂಡ್ ಸ್ಟ್ಯಾಂಡರ್ಡ್ಸ್ ಆಕ್ಟ್-2006 ರಡಿ ಪರವಾನಗಿ ಹಾಗೂ ಮೆಸ್ಕಾಂನಿಂದ ವಿದ್ಯುತ್ ಸಂಪರ್ಕವನ್ನೂ ಪಡೆಯಲಾಗಿತ್ತು.
ಆದರೆ, ಈ ಹೋಟೆಲ್ ಕಟ್ಟಡದ ಜಾಗದ ಕುರಿತು ಈಶ್ವರ ಗೌಡ ಹಾಗೂ ಅವರ ಸಹೋದರ ಆನಂದ ಗೌಡ ಅವರ ನಡುವೆ ವಿವಾದವಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ. 2025ರ ಮಾರ್ಚ್ ತನಕ ಹೋಟೆಲ್ ವ್ಯಾಪಾರಕ್ಕೆ ಪಂಚಾಯತ್ ಪರವಾನಗಿ ಇತ್ತಾದರೂ, ಆ ಬಳಿಕ ಸಹೋದರರ ನಡುವಿನ ಸಿವಿಲ್ ಕೋರ್ಟ್ ವಿವಾದದ ಕಾರಣದಿಂದ ಪಂಚಾಯತ್ ಪರವಾನಗಿಯನ್ನು ನವೀಕರಿಸಿರಲಿಲ್ಲ. ಪರವಾನಗಿ ನವೀಕರಿಸದೆ ಹೋಟೆಲ್ ನಡೆಸುತ್ತಿರುವ ಬಗ್ಗೆ ಆನಂದ ಗೌಡ ಹಾಗೂ ಹರೀಶ ಗೌಡ ಎಂಬವರು ಪಂಚಾಯತ್ಗೆ ದೂರು ನೀಡಿದ್ದರು. ದೂರು ಬಂದ ಹಿನ್ನೆಲೆಯಲ್ಲಿ ವ್ಯಾಪಾರ ಸ್ಥಗಿತಗೊಳಿಸುವಂತೆ ಈಶ್ವರ ಗೌಡ ಅವರಿಗೆ ಪಿಡಿಒ ನೋಟಿಸ್ ನೀಡಿದ್ದರು ಎನ್ನಲಾಗಿದೆ.
ನೋಟಿಸ್ ನೀಡದೆ ಬಂದ್ ಮಾಡಲು ಮಾಲೀಕರು, ವಕೀಲರ ಆಕ್ಷೇಪ:
ಯಾವುದೇ ಹೊಸ ನೋಟಿಸ್ ನೀಡದೆ ಏಕಾಏಕಿ ಹೋಟೆಲ್ ಬಂದ್ ಮಾಡಿಸುತ್ತಿರುವುದಕ್ಕೆ ಹೋಟೆಲ್ ಮಾಲೀಕರ ಪರ ವಕೀಲರಾದ ಲೋಕೇಶ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. “ಮನೆಯ ಎದುರುಗಡೆ ಜೀವನೋಪಾಯಕ್ಕಾಗಿ ಅಂಗಡಿ ಇಟ್ಟು ವ್ಯಾಪಾರ ನಡೆಸುವ ಅನೇಕ ಪ್ರಕರಣಗಳಿವೆ. ಈ ಹೋಟೆಲ್ ಅಕ್ರಮ ಆಗಿದ್ದಲ್ಲಿ ಪಿಡಬ್ಲ್ಯೂಡಿ, ತಹಶೀಲ್ದಾರ್ ಅವರಿಂದ ತನಿಖೆ ನಡೆಸಬೇಕಾಗಿತ್ತು. ವಿವಾದ ಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿರುವಾಗಲೇ ಯಾವುದೇ ನೋಟಿಸ್ ನೀಡದೆ ಬಂದ್ ಮಾಡಲು ಬಂದಿದ್ದೀರಿ. ನೋಟಿಸ್ ನೀಡಿದ್ದಲ್ಲಿ ನಾವು ಅದಕ್ಕೆ ಉತ್ತರ ಕೊಡುತ್ತಿದ್ದೆವು” ಎಂದು ವಾದಿಸಿದರು.


ಕೋರ್ಟ್ ಆದೇಶದ ತನಕ ವ್ಯಾಪಾರ ಸ್ಥಗಿತಕ್ಕೆ ಇಒ ಸೂಚನೆ:
ಆದರೆ ಈ ಆಕ್ಷೇಪಗಳನ್ನು ಒಪ್ಪದ ತಾ.ಪಂ. ಇಒ ನವೀನ್ ಭಂಡಾರಿ ಅವರು, “ಗ್ರಾಮ ಪಂಚಾಯತ್ನಿಂದ ನೀಡಿರುವ ಪರವಾನಗಿ ಈಗ ಚಾಲ್ತಿಯಲ್ಲಿಲ್ಲ. ದೂರು ಬಂದ ಹಿನ್ನೆಲೆಯಲ್ಲಿ ವ್ಯಾಪಾರ ಸ್ಥಗಿತಕ್ಕೆ ಪಂಚಾಯತ್ನಿಂದ ನೋಟಿಸ್ ನೀಡಲಾಗಿತ್ತು. ನಾವು ಅಂಗಡಿ ಸೀಲ್ ಮಾಡಲು ಬಂದಿಲ್ಲ, ಬದಲಾಗಿ ವ್ಯಾಪಾರ ಮಾಡದಂತೆ ಸೂಚಿಸುತ್ತಿದ್ದೇವೆ” ಎಂದರು. ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ತೀರ್ಪು ಬರುವ ತನಕ ವ್ಯಾಪಾರ ಸ್ಥಗಿತಗೊಳಿಸುವಂತೆ ಸ್ಪಷ್ಟಪಡಿಸಿದ ಅವರು, ಕನ್ಸ್ಟ್ರಕ್ಷನ್, 9/11 ಸೇರಿದಂತೆ ಎಲ್ಲಾ ಕಾನೂನುಬದ್ಧ ದಾಖಲೆಗಳನ್ನು ತಂದುಕೊಟ್ಟರೆ ಮರು ಪರವಾನಗಿ ನವೀಕರಿಸಿಕೊಡುವುದಾಗಿ ಮಾಲೀಕರಿಗೆ ಭರವಸೆ ನೀಡಿದರು.
ಸಹೋದರರ ನಡುವಿನ ಕಾನೂನು ಸಮರ:
ಅಕ್ಷಯ ಹೋಟೆಲ್ ಮಾಲೀಕ ಈಶ್ವರ ಗೌಡ ಅವರು ಸರ್ವೆ ನಂ. 149/1 ರಲ್ಲಿ ನಿರ್ಮಿಸುತ್ತಿರುವ ಕಟ್ಟಡ ಕಾಮಗಾರಿಯನ್ನು ತಕ್ಷಣ ನಿಲ್ಲಿಸುವಂತೆ ಅವರ ಸಹೋದರ ಆನಂದ ಗೌಡ ಅವರು ತಾ.ಪಂ. ಇಒ ಅವರಿಗೆ ದೂರು ನೀಡಿದ್ದರು. ಅಷ್ಟೇ ಅಲ್ಲದೆ, ಈ ಬಗ್ಗೆ ಆನಂದ ಗೌಡ ಅವರು ದ.ಕ. ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿ ಕಟ್ಟಡ ನಿರ್ಮಾಣದ ವಿರುದ್ಧ ಮಧ್ಯಂತರ ನಿರ್ಬಂಧಕಾಜ್ಞೆ ತಂದಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ ಈಶ್ವರ ಗೌಡ ಅವರು ಸಹ ಹೋಟೆಲ್ ವ್ಯಾಪಾರಕ್ಕೆ ಅಡ್ಡಿಪಡಿಸದಂತೆ ಪುತ್ತೂರು ಪ್ರಿನ್ಸಿಪಾಲ್ ಸಿವಿಲ್ ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡಿ ಮಧ್ಯಂತರ ನಿರ್ಬಂಧಕಾಜ್ಞೆ ತಂದಿದ್ದರು. ಸಹೋದರರ ನಡುವಿನ ಈ ಸಿವಿಲ್ ವಿವಾದ ನ್ಯಾಯಾಲಯದಲ್ಲಿ ಬಾಕಿ ಇರುವುದರಿಂದ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.
ಈ ಕಾರ್ಯಾಚರಣೆಯ ಸಂದರ್ಭದಲ್ಲಿ ತಾ.ಪಂ. ಇಒ ಅವರ ಜೊತೆಗೆ ತಾ.ಪಂ. ಸಹಾಯಕ ನಿರ್ದೇಶಕ, ನೂಜಿಬಾಳ್ತಿಲ ಗ್ರಾ.ಪಂ. ಪಿಡಿಒ ಹಾಗೂ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಕಡಬ ಪೊಲೀಸರು ಸ್ಥಳದಲ್ಲಿ ಸೂಕ್ತ ಬಂದೋಬಸ್ತ್ ಒದಗಿಸಿದ್ದರು.
