ದಕ್ಷಿಣ ಕನ್ನಡ: ವೃದ್ಧೆ ಕೊಲೆ ಕೇಸ್: ಆರೈಕೆಗಾರ್ತಿ ಸೇರಿ ಮೂವರಿಗೆ ಜೀವಾವಧಿ ಶಿಕ್ಷೆ

kadaba times

ಬಂಟ್ವಾಳ ತಾಲೂಕಿನ ಅಮ್ಮುಂಜೆಯಲ್ಲಿ 2021ರಲ್ಲಿ ನಡೆದಿದ್ದ 73 ವರ್ಷದ ವೃದ್ಧೆ ಬೆನಡಿಕ್ಟ್ ಕಾರ್ಲೋ ಅವರ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಮಹತ್ವದ ತೀರ್ಪು ಪ್ರಕಟಿಸಿದೆ. ವೃದ್ಧೆಯ ಆರೈಕೆಗಾರ್ತಿಯಾಗಿದ್ದ ಏಲ್ಮಾ ಪ್ರೆಶ್ಚಿತ್ ಬರೆಟ್ರೋ ಹಾಗೂ ಆಕೆಯ ಇಬ್ಬರು ಸ್ನೇಹಿತರಿಗೆ ಚಿನ್ನಾಭರಣ ಸುಲಿಗೆ ಹಾಗೂ ಕೊಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ಮೂವರಿಗೂ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.

kadaba times
uniq

ಚಿನ್ನಾಭರಣದ ಆಸೆಗಾಗಿ ತಾವು ಆರೈಕೆ ಮಾಡುತ್ತಿದ್ದ ವೃದ್ಧೆಯನ್ನೇ ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ ಇದೀಗ ಮಂಗಳೂರಿನ ನ್ಯಾಯಾಲಯವು ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿ ಮಹತ್ವದ ತೀರ್ಪು ನೀಡಿದೆ.

ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಜಗದೀಶ್‌ ವಿ.ಎನ್. ಅವರು ಜುಲೈ 28 ರಂದು (28-07-2026) ಈ ತೀರ್ಪು ಪ್ರಕಟಿಸಿದ್ದಾರೆ.

ಪ್ರಕರಣದ ಹಿನ್ನೆಲೆ: 

ಬಂಟ್ವಾಳದ ಅಮ್ಮುಂಜೆ ನಿವಾಸಿಯಾದ ವೃದ್ಧೆ ಬೆನಡಿಕ್ಟ್ ಕಾರ್ಲೋ (73) ಅವರ ಆರೈಕೆ ನೋಡಿಕೊಳ್ಳಲು ಬಂಟ್ವಾಳ ಅಮ್ಟಾಡಿ ನಿವಾಸಿ ಕು. ಏಲ್ಮಾ ಪ್ರೆಶ್ಚಿತ್ ಬರೆಟ್ರೋ (23) ಎಂಬಾಕೆಯನ್ನು ನೇಮಿಸಲಾಗಿತ್ತು. ಆದರೆ, ವೃದ್ಧೆಯ ಬಳಿಯಿದ್ದ ಚಿನ್ನಾಭರಣಗಳ ಮೇಲೆ ಕಣ್ಣುಹಾಕಿದ್ದ ಏಲ್ಮಾ, ಅದನ್ನು ಸುಲಿಗೆ ಮಾಡುವ ದುರುದ್ದೇಶದಿಂದ ಸಂಚು ರೂಪಿಸಿದ್ದಳು.

ತನ್ನ ಸ್ನೇಹಿತ, ಬಂಟ್ವಾಳ ನರಿಕೊಂಬು ನಿವಾಸಿ ಸತೀಶ ನಾಯಕ್ (28) ಎಂಬಾತನ ಸಹಾಯದಿಂದ ವೃದ್ಧೆ ಸೇವಿಸುವ ಆಹಾರದಲ್ಲಿ ವಿಷ ಬೆರೆಸಿ ಕೊಲ್ಲಲು ಮೊದಲು ಯತ್ನಿಸಿದ್ದಳು. ಆದರೆ, ಆ ಪ್ರಯತ್ನದಲ್ಲಿ ಸಫಲರಾಗದಿದ್ದಾಗ ಮತ್ತೋರ್ವ ಆರೋಪಿ, ನರಿಕೊಂಬು ನಿವಾಸಿ ಚರಣ್ ಕುಮಾರ್ (31) ಎಂಬಾತನ ಸಹಾಯ ಪಡೆದಿದ್ದಳು.

kadaba times
kadaba times

ದಿನಾಂಕ 25-01-2021 ರಂದು ರಾತ್ರಿ, ಈ ಮೂವರು ಸೇರಿ ಬೆನಡಿಕ್ಟ್ ಕಾರ್ಲೋ ಅವರನ್ನು ಉಸಿರುಗಟ್ಟಿಸಿ ಭೀಕರವಾಗಿ ಕೊಲೆ ಮಾಡಿದ್ದರು. ಬಳಿಕ ವೃದ್ಧೆಯ ಮೈಮೇಲಿದ್ದ ಒಟ್ಟು 61.070 ಗ್ರಾಂ ತೂಕದ ಚಿನ್ನಾಭರಣಗಳನ್ನು (ಅಂದಿನ ಮೌಲ್ಯ ಅಂದಾಜು ₹3 ಲಕ್ಷ) ಸುಲಿಗೆ ಮಾಡಿ, ಸಾಕ್ಷಿ ನಾಶಪಡಿಸಲು ಯತ್ನಿಸಿದ್ದರು.

ಪೊಲೀಸರ ಚುರುಕಿನ ತನಿಖೆ ಮತ್ತು ನ್ಯಾಯಾಲಯದ ತೀರ್ಪು:

ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ (ಅ.ಕ್ರ. 22/2021, ಕಲಂ: 302, 392, 120 (ಬಿ), 201 ಜೊತೆಗೆ 34 ಐಪಿಸಿ) ಪ್ರಕರಣ ದಾಖಲಾಗಿತ್ತು. ಅಂದಿನ ಬಂಟ್ವಾಳ ಗ್ರಾಮಾಂತರ ಠಾಣಾ ಉಪನಿರೀಕ್ಷಕರಾದ (SI) ಪ್ರಸನ್ನ ಎಮ್.ಎಸ್ ಅವರು ಕಾರ್ಯಾಚರಣೆ ನಡೆಸಿ ಮೂವರೂ ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ಬಳಿಕ ಅಂದಿನ ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕರಾಗಿದ್ದ (CI) ಟಿ.ಡಿ. ನಾಗರಾಜ್ ಅವರು ಪ್ರಕರಣದ ಸಮಗ್ರ ತನಿಖೆ ನಡೆಸಿ, ಅಗತ್ಯ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದ್ದರು.

ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯವು, ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮೂವರೂ ಆರೋಪಿಗಳನ್ನು ದೋಷಿಗಳು ಎಂದು ತೀರ್ಮಾನಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ. ಸರಕಾರದ ಪರವಾಗಿ ಅಭಿಯೋಜಕರಾದ ಶ್ರೀಮತಿ ಜ್ಯೋತಿ ಪ್ರಮೋದ್‌ ನಾಯಕ್‌ ಅವರು ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಿದ್ದರು.

Related Articles

Latest Articles