ಧರ್ಮಸ್ಥಳ ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾದ ಅಸ್ಥಿಪಂಜರ :DNA ಮೂಲಕ ಮೂವರ ಗುರುತು ದೃಢ

kadaba times

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಬಂಗ್ಲೆಗುಡ್ಡೆಯಲ್ಲಿ ಎಸ್‌ಐಟಿ (SIT) ನಡೆಸಿದ್ದ ಶೋಧ ಕಾರ್ಯಾಚರಣೆ ವೇಳೆ ಪತ್ತೆಯಾಗಿದ್ದ ಅಸ್ಥಿಪಂಜರಗಳ ಪೈಕಿ ಮೂವರ ಗುರುತು ಡಿಎನ್‌ಎ (DNA) ಪರೀಕ್ಷೆಯ ಮೂಲಕ ದೃಢಪಟ್ಟಿದೆ. ಕೊಡಗಿನ ಯು.ಬಿ. ಅಯ್ಯಪ್ಪ, ತುಮಕೂರಿನ ಆದಿಶೇಷ ನಾರಾಯಣ ಹಾಗೂ ಕೋಲಾರದ ಕೃಷ್ಣಪ್ಪ ಎಂಬವರ ಅಸ್ಥಿಪಂಜರಗಳು ಇವಾಗಿವೆ ಎಂದು ಎಫ್‌ಎಸ್‌ಎಲ್ (FSL) ವರದಿ ಖಚಿತಪಡಿಸಿದ್ದು, ಎಸ್‌ಐಟಿ ತಂಡ ಬೆಳ್ತಂಗಡಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದೆ.

kadaba times
uniq

ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನೇತ್ರಾವತಿ ನದಿ ಸಮೀಪದ ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾಗಿದ್ದ ಅಸ್ಥಿಪಂಜರಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ (SIT) ತನಿಖೆಯಲ್ಲಿ ಪ್ರಮುಖ ಮೈಲಿಗಲ್ಲು ಸಿಕ್ಕಿದೆ. ಪತ್ತೆಯಾಗಿದ್ದ ಅಸ್ಥಿಪಂಜರಗಳಲ್ಲಿ ಒಟ್ಟು ಮೂರು ವ್ಯಕ್ತಿಗಳ ಕುಟುಂಬದ ಡಿಎನ್‌ಎ (DNA) ತಾಳೆಯಾಗಿರುವುದಾಗಿ ಎಫ್‌ಎಸ್‌ಎಲ್ (FSL) ಪ್ರಯೋಗಾಲಯವು ದೃಢಪಡಿಸಿದೆ.

ಎಸ್‌ಐಟಿ ಅಧಿಕಾರಿಗಳು ಬೆಳ್ತಂಗಡಿ ನ್ಯಾಯಾಲಯಕ್ಕೆ ಜುಲೈ 15 ರಂದು ಸಲ್ಲಿಸಿದ ಅಂತಿಮ ವರದಿಯಲ್ಲಿ ಈ ಮೂವರ ಡಿಎನ್‌ಎ ದೃಢಪಟ್ಟಿರುವ ಮಹತ್ವದ ವಿಚಾರವನ್ನು ಉಲ್ಲೇಖಿಸಿದ್ದಾರೆ. ಎಸ್‌ಐಟಿ ಅಧಿಕಾರಿಗಳು ಬಂಗ್ಲೆಗುಡ್ಡೆಯಲ್ಲಿ 17-09-2025 ಮತ್ತು 18-09-2025 ರಂದು ಸುದೀರ್ಘ ಶೋಧ ಕಾರ್ಯಾಚರಣೆ ನಡೆಸಿ, ಒಟ್ಟು ಏಳು ಅಸ್ಥಿಪಂಜರಗಳನ್ನು ಪತ್ತೆ ಹಚ್ಚಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಿದ್ದರು.

ಈ ವೇಳೆ ಅಸ್ಥಿಪಂಜರಗಳು ಪತ್ತೆಯಾದ ಸ್ಥಳದಲ್ಲಿ ಕೆಲವು ಗುರುತಿನ ಚೀಟಿಗಳು (ID Cards) ಪತ್ತೆಯಾಗಿದ್ದವು. ಅದರ ಆಧಾರದಲ್ಲಿ ಸಂಬಂಧಪಟ್ಟ ಕುಟುಂಬಸ್ಥರನ್ನು ಪತ್ತೆಹಚ್ಚಿದ ಎಸ್‌ಐಟಿ, ಬೆಳ್ತಂಗಡಿ ನ್ಯಾಯಾಲಯದ ಮುಖಾಂತರ ಕುಟುಂಬಸ್ಥರ ರಕ್ತದ ಮಾದರಿ (DNA) ಸಂಗ್ರಹಿಸಿ ಪರೀಕ್ಷೆಗೆ ರವಾನಿಸಿತ್ತು. ಇದೀಗ ಬಂದಿರುವ ವರದಿಯಲ್ಲಿ ಮೂವರ ಡಿಎನ್‌ಎ ಸಂಪೂರ್ಣವಾಗಿ ತಾಳೆಯಾಗಿದೆ.

ಡಿಎನ್‌ಎ ಮೂಲಕ ಪತ್ತೆಯಾದವರ ವಿಳಾಸ ಮತ್ತು ಹಿನ್ನೆಲೆ:

  1. ಯು.ಬಿ. ಅಯ್ಯಪ್ಪ (70 ವರ್ಷ):ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಗ್ರಾಮದ ನಿವಾಸಿ. ಇವರು 25-06-2017 ರಂದು ಮೈಸೂರಿನ ಆಸ್ಪತ್ರೆಗೆ ಚಿಕಿತ್ಸೆಗೆಂದು ತೆರಳಿದ್ದವರು ವಾಪಸ್ ಬಾರದೆ ನಾಪತ್ತೆಯಾಗಿದ್ದರು. ಈ ಕುರಿತು ಕುಟ್ಟ ವೃತ್ತದ ಶ್ರೀಮಂಗಳ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

    kadaba times
    kadaba times
  2. ಆದಿಶೇಷ ನಾರಾಯಣ (27 ವರ್ಷ):ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದಾಸರಕಲ್ಲಹಳ್ಳಿ ನಿವಾಸಿ. ಬೆಂಗಳೂರಿನ ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಈತ, 02-10-2013 ರಂದು ಮನೆಗೆ ಬಂದು ತನ್ನ ಮೊಬೈಲ್ ಇಟ್ಟು ಮತ್ತೆ ನಾಪತ್ತೆಯಾಗಿದ್ದ. ಈತ ಪದೇ ಪದೇ ಮನೆಯಿಂದ ಹೋಗಿ ವಾಪಸ್ ಬರುತ್ತಿದ್ದ ಕಾರಣ ಕುಟುಂಬಸ್ಥರು ಠಾಣೆಗೆ ದೂರು ನೀಡಿರಲಿಲ್ಲ.

  3. ಕೃಷ್ಣಪ್ಪ (85 ವರ್ಷ): ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮೀಸಗಾಣಹಳ್ಳಿ ನಿವಾಸಿ. ವಯೋಸಹಜ ಸ್ಥಿತಿಯಲ್ಲಿದ್ದ ಇವರು 22-10-2024 ರಂದು ಏಕಾಏಕಿ ಮನೆಯಿಂದ ಹೊರಹೋಗಿ ವಾಪಸ್ ಬಂದಿರಲಿಲ್ಲ. ಈ ಬಗ್ಗೆ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಕುಟುಂಬಕ್ಕೆ ಅಸ್ಥಿಪಂಜರ ಹಸ್ತಾಂತರಕ್ಕೆ ಅವಕಾಶ:

ಡಿಎನ್‌ಎ ವರದಿ ದೃಢಪಟ್ಟಿರುವ ಹಿನ್ನೆಲೆಯಲ್ಲಿ, ಮೃತರ ಮೂರು ಕುಟುಂಬಗಳ ಸದಸ್ಯರು ಎಸ್‌ಐಟಿಗೆ ಅಧಿಕೃತ ಮನವಿ ಸಲ್ಲಿಸಿದರೆ, ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಅಸ್ಥಿಪಂಜರಗಳನ್ನು ಆಯಾ ಕುಟುಂಬಗಳಿಗೆ ಹಸ್ತಾಂತರಿಸಲು ಅವಕಾಶ ಕಲ್ಪಿಸಲಾಗಿದೆ. ಉಳಿದ ಅಸ್ಥಿಪಂಜರಗಳ ತನಿಖೆ ಹಾಗೂ ಪ್ರಕರಣದ ಇತರ ಆಯಾಮಗಳ ಕುರಿತು ಎಸ್‌ಐಟಿ ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ.

Related Articles

Latest Articles