
ಕಡಬ: ಆಕಸ್ಮಿಕವಾಗಿ ಕೆರೆಗೆ ಬಿದ್ದು ಹೊರಬರಲಾರದೆ ಒದ್ದಾಡುತ್ತಿದ್ದ ದನವೊಂದನ್ನು ಸ್ಥಳೀಯ ನಾಗರಿಕರು ಅತ್ಯಂತ ಶ್ರಮವಹಿಸಿ, ಸುರಕ್ಷಿತವಾಗಿ ಹೊರತೆಗೆದು ಜೀವ ರಕ್ಷಿಸಿದ ಶ್ಲಾಘನೀಯ ಘಟನೆ ಮರ್ಧಾಳ ಸಮೀಪ ನಡೆದಿದೆ.


ಮರ್ಧಾಳದ ತೋಟವೊಂದರ ಆವರಣದಲ್ಲಿ ಮೇಯುತ್ತಿದ್ದ ದನವೊಂದು ಆಕಸ್ಮಿಕವಾಗಿ ಅಲ್ಲೇ ಇದ್ದ ಕೆರೆಗೆ ಬಿದ್ದಿತ್ತೆನ್ನಲಾಗಿದೆ. ಕೆರೆಯಿಂದ ಮೇಲೆ ಬರಲಾಗದೆ ದನವು ತೀವ್ರವಾಗಿ ಒದ್ದಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ.
ಮಳೆಯ ವಾತಾವರಣವಿದ್ದರೂ ಲೆಕ್ಕಿಸದೆ ಜಮಾಯಿಸಿದ ಸ್ಥಳೀಯ ಯುವಕರು ಮತ್ತು ಸಾರ್ವಜನಿಕರು, ಹಗ್ಗಗಳ ಸಹಾಯದಿಂದ ದನವನ್ನು ಸುರಕ್ಷಿತವಾಗಿ ಕಟ್ಟಿ, ಎಲ್ಲರೂ ಒಟ್ಟಾಗಿ ಶ್ರಮವಹಿಸಿ ಮೇಲಕ್ಕೆ ಎತ್ತುವಲ್ಲಿ ಯಶಸ್ವಿಯಾಗಿದ್ದಾರೆ.


ಸಕಾಲದಲ್ಲಿ ಸಾರ್ವಜನಿಕರು ಸ್ಪಂದಿಸಿದ ಕಾರಣ ಮೂಕ ಜೀವವೊಂದು ದೊಡ್ಡ ಆಪತ್ತಿನಿಂದ ಪಾರಾದಂತಾಗಿದೆ. ನಾಗರಿಕರ ಈ ಸಮಯಪ್ರಜ್ಞೆ ಮತ್ತು ಮಾನವೀಯ ಕಾರ್ಯಕ್ಕೆ ಸ್ಥಳೀಯ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
