
ಕಡಬ: ಸರಕಾರ ಹಾಗೂ ಜನಪ್ರತಿನಿಧಿಗಳು ಗ್ರಾಮೀಣ ಭಾಗದ ರಸ್ತೆ ಸಂಪರ್ಕ ಸುಧಾರಣೆಗೆ ಲಕ್ಷಾಂತರ ರೂಪಾಯಿ ಅನುದಾನ ಬಿಡುಗಡೆಯಾಗುತ್ತದೆ. ಅದರಂತೆ ಇಲ್ಲಿನ ಡಿಮ್ಯಾಯಿಲ ಪ್ರದೇಶದಲ್ಲಿ ಇತ್ತೀಚೆಗೆ ನಿರ್ಮಿಸಲಾದ ಕಾಂಕ್ರೀಟ್ ರಸ್ತೆಯ ಇಕ್ಕೆಲಗಳಲ್ಲಿ ಸರಿಯಾಗಿ ಮಣ್ಣು ತುಂಬಿಸದ ಕಾರಣ ಸ್ಥಳೀಯ ಜನರು ಹಾಗೂ ಪ್ರಯಾಣಿಕರು ದಿನನಿತ್ಯ ತೀವ್ರ ತೊಂದರೆ ಅನುಭವಿಸುವಂತಾಗಿದೆ.


ಸ್ಥಳದಲ್ಲಿ ಅಳವಡಿಸಲಾಗಿರುವ ಅಧಿಕೃತ ಸರ್ಕಾರಿ ಮಾಹಿತಿ ಫಲಕದ ಪ್ರಕಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಅಡಿಯಲ್ಲಿ (ಉಪ ವಿಭಾಗ – ಪುತ್ತೂರು), ಎಸ್ಸಿಪಿ ಯೋಜನೆಯಡಿ ಮಂಜೂರಾದ ಬರೋಬ್ಬರಿ ರೂ. 10.00 ಲಕ್ಷ ಅಂದಾಜು ವೆಚ್ಚದಲ್ಲಿ “ಕಡಬ ತಾಲೂಕು ಎಡಮಂಗಲ ಗ್ರಾಮದ ಡಿಮ್ಯಾಯಿಲ ಪ.ಜಾತಿ ಕಾಲೋನಿ ರಸ್ತೆ ಅಭಿವೃದ್ಧಿ ಕಾಮಗಾರಿ (ಲೆಕ್ಕ ಶೀರ್ಷಿಕೆ: ೨೦೨೫-೨೬ ನೇ ಸಾಲಿನ ೫೦೫೪ ರ ವಿಶೇಷ ಅನುದಾನ)” ಯನ್ನು ಕೈಗೆತ್ತಿಕೊಳ್ಳಲಾಗಿತ್ತು.
ಗುತ್ತಿಗೆದಾರರು ರಸ್ತೆಗೆ ಕಾಂಕ್ರೀಟ್ ಸ್ಲ್ಯಾಬ್ ಹಾಕುವ ಕೆಲಸವನ್ನೇನೋ ಮುಗಿಸಿದ್ದಾರೆ, ಆದರೆ ನಿಯಮಾವಳಿಗಳ ಪ್ರಕಾರ ರಸ್ತೆ ನಿರ್ಮಾಣವಾದ ನಂತರ ಅದರ ಇಕ್ಕೆಲಗಳಲ್ಲಿ (ಅಕ್ಕಪಕ್ಕ) ಸರಿಯಾಗಿ ಮಣ್ಣು ತುಂಬಿಸಿ ರಸ್ತೆಯ ಮಟ್ಟಕ್ಕೆ ತರಬೇಕಾದ ಅಂತಿಮ ಹಂತದ ಅತ್ಯಂತ ಪ್ರಮುಖ ಕಾರ್ಯವನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ್ದಾರೆ. ಕಾಂಕ್ರೀಟ್ ಸ್ಲ್ಯಾಬ್ನ ಅಂಚು ಮತ್ತು ಪಕ್ಕದ ಜಮೀನಿನ ನಡುವೆ ಭಾರಿ ಪ್ರಮಾಣದ ಆಳವಾದ ತೆರೆದ ಕಂದಕಗಳು ಹಾಗೇ ಉಳಿದುಕೊಂಡಿವೆ.


ಅಪಘಾತದ ಭೀತಿಯಲ್ಲಿ ಶಾಲಾ ಮಕ್ಕಳು, ಹಿರಿಯ ನಾಗರಿಕರು
ಈ ರಸ್ತೆಯು ಕಿರಿದಾಗಿದ್ದು, ಇಕ್ಕೆಲಗಳಲ್ಲಿ ಮಣ್ಣು ಇಲ್ಲದ ಕಾರಣ ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಎದುರಿನಿಂದ ಯಾವುದೇ ವಾಹನ ಬಂದಾಗ ಅಥವಾ ಸ್ವಲ್ಪ ಆಯತಪ್ಪಿದರೂ ಬೈಕ್ ಸವಾರರು ನೇರವಾಗಿ ರಸ್ತೆ ಬದಿಯ ಗುಂಡಿಗಳಿಗೆ ಬಿದ್ದು ಅಪಘಾತಕ್ಕೆ ಈಡಾಗುವ ಸಂಭವ ಹೆಚ್ಚಾಗಿದೆ. ಶಾಲಾ ಮಕ್ಕಳು ಹಾಗೂ ಹಿರಿಯ ನಾಗರಿಕರು ದಿನನಿತ್ಯ ಇದೇ ರಸ್ತೆಯ ಮೂಲಕ ನಡೆದುಕೊಂಡು ಹೋಗಬೇಕಾಗಿದ್ದು, ಪಕ್ಕಕ್ಕೆ ಸರಿಯಲು ಜಾಗವಿಲ್ಲದೆ ಜೀವ ಕೈಯಲ್ಲಿ ಹಿಡಿದು ಸಾಗುತ್ತಿದ್ದಾರೆ. ಈಗಾಗಲೇ ಮಣ್ಣು ತುಂಬಿಸದ ಕಾರಣ ಮುಂಬರುವ ಭಾರಿ ಮಳೆಗೆ ರಸ್ತೆ ಪಕ್ಕದ ಮಣ್ಣು ಮತ್ತಷ್ಟು ಕುಸಿದು ಇಡೀ ಕಾಂಕ್ರೀಟ್ ರಸ್ತೆಯೇ ಬಿರುಕು ಬಿಡುವ ಅಪಾಯ ಎದುರಾಗಿದೆ.
ಈ ಬಗ್ಗೆ ಗ್ರಾಮ ಪಂಚಾಯಿತಿಯ ಗಮನಕ್ಕೆ ತರಲಾಗಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ವ್ಯಕ್ತವಾಗಿದೆ . ಯಾವುದೇ ದೊಡ್ಡ ಮಟ್ಟದ ಪ್ರಾಣಾಪಾಯ ಅಥವಾ ಅನಾಹುತ ಸಂಭವಿಸುವ ಮುನ್ನ ಸಂಬಂಧಪಟ್ಟ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಹಿರಿಯ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಉನ್ನತ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಜರುಗಿಸಿ, ರಸ್ತೆಯ ಎರಡೂ ಬದಿಗಳಿಗೆ ತಕ್ಷಣವೇ ಗುಣಮಟ್ಟದ ಮಣ್ಣನ್ನು ತುಂಬಿಸಿ ರಸ್ತೆಯನ್ನು ಸುಗಮ ಸಂಚಾರಕ್ಕೆ ಮುಕ್ತಗೊಳಿಸಬೇಕೆಂದು ಡಿಮ್ಯಾಯಿಲ ನಿವಾಸಿಗಳು ಆಗ್ರಹಿಸಿದ್ದಾರೆ.
