
ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾಗುವ ಸುಂದರ ಹುಡುಗಿಯರ ಪ್ರೊಫೈಲ್ ನೋಡಿ ಫ್ಲಾಟ್ ಆಗುವ ಮುನ್ನ ಈ ಸ್ಟೋರಿ ಓದಿ! ಹುಡುಗಿ ಅಂತ ನಂಬಿ, ಅವಳ ಮಧುರ ಧ್ವನಿಗೆ ಮರುಳಾಗಿ ಪುತ್ತೂರಿನ ಯುವಕನೊಬ್ಬ ಬರೋಬ್ಬರಿ 4.84 ಲಕ್ಷ ರೂಪಾಯಿ ಕಳೆದುಕೊಂಡು ಕಣ್ಣೀರು ಹಾಕುತ್ತಿರುವ ಘಟನೆ ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


ಅಷ್ಟಕ್ಕೂ ಅಲ್ಲಿ ನಡೆದಿದ್ದೇನು? ಆ ‘ಅನ್ನಪೂರ್ಣ’ಳ ಅಸಲಿ ಮುಖವಾಡ ಕಳಚಿದ್ದು ಹೇಗೆ? ಇಲ್ಲಿದೆ ನೋಡಿ ಆ ರೋಚಕ ಸ್ಟೋರಿ.
ಕಳೆದ 2025ರ ಡಿಸೆಂಬರ್ ತಿಂಗಳಿನಲ್ಲಿ ಪುತ್ತೂರಿನ ನಿವಾಸಿಯೊಬ್ಬರಿಗೆ ಸ್ನಾಪ್ಚಾಟ್ನಲ್ಲಿ ‘ಅನ್ನಪೂರ್ಣಗೌಡ 26’ (Annapurna Gowda) ಎಂಬ ಐಡಿಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಪ್ರೊಫೈಲ್ ನೋಡಿದಾಗ ಸುಂದರ ಹುಡುಗಿ! ಪರಿಚಯ ಬೆಳೆಸಿಕೊಂಡ ಆ ಕಿಲಾಡಿ, ತಾನು ಬೆಂಗಳೂರಿನ ಹೆಸರಾಂತ ‘ವಿಪ್ರೋ’ (Wipro) ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ನಂಬಿಸಿದ್ದಾಳೆ.
ಮಾತು ಮುಂದುವರಿದು ಇಬ್ಬರೂ ವಾಟ್ಸ್ ಆಪ್ ನಂಬರ್ ಕೂಡ ಎಕ್ಸ್ಚೇಂಜ್ ಮಾಡಿಕೊಂಡಿದ್ದಾರೆ. ವಾಟ್ಸ್ ಆಪ್ನಲ್ಲಿ ಹುಡುಗಿಯ ಧ್ವನಿಯಲ್ಲೇ ಕರಗುವಂತೆ ಮಾತನಾಡುತ್ತಿದ್ದ ಆಕೆ, ಮೆಸೇಜ್ಗಳ ಮೂಲಕ ಪುತ್ತೂರಿನ ಯುವಕನ ಮನಸ್ಸನ್ನು ಪೂರ್ತಿಯಾಗಿ ಕದ್ದಿದ್ದಾಳೆ.


ಕಷ್ಟದ ನೆಪವೊಡ್ಡಿ ಲಕ್ಷ ಲಕ್ಷ ಲೂಟಿ!
ಒಮ್ಮೆ ನಂಬಿಕೆ ಸಂಪೂರ್ಣವಾಗಿ ಕುದುರಿದ ಬಳಿಕ ಆ ‘ಮಾಯಾವಿ’ ತನ್ನ ಅಸಲಿ ಆಟ ಶುರು ಮಾಡಿದ್ದಾಳೆ. 2026ರ ಫೆಬ್ರವರಿಯಿಂದ ಏಪ್ರಿಲ್ ತಿಂಗಳ ಅವಧಿಯಲ್ಲಿ “ನನಗೆ ತೀರಾ ಹಣಕಾಸಿನ ತೊಂದರೆಯಿದೆ, ಅರ್ಜೆಂಟ್ ಸಹಾಯ ಬೇಕು” ಎಂದು ತರಹೇವಾರಿ ನೆಪಗಳನ್ನು ಹೇಳಿ ಯುವಕನಿಂದ ಹಂತ ಹಂತವಾಗಿ ಒಟ್ಟು ರೂ. 4,84,203 (ನಾಲ್ಕು ಲಕ್ಷದ ಎಂಬತ್ತನಾಲ್ಕು ಸಾವಿರದ ಇನ್ನೂರ ಮೂರು ರೂ.) ಹಣವನ್ನು ತನ್ನ ಖಾತೆಗೆ ಹಾಕಿಸಿಕೊಂಡಿದ್ದಾಳೆ. ಯುವಕ ಕೂಡ ಆಕೆಯನ್ನು ಅತಿಯಾಗಿ ನಂಬಿ ಕೇಳಿದಾಗಲೆಲ್ಲಾ ಹಣ ಕಳುಹಿಸಿದ್ದಾನೆ.
🚨 ಅಸಲಿ ಟ್ವಿಸ್ಟ್ ಬಿಚ್ಚಿಟ್ಟ ಗೆಳೆಯರು!
ದಿನಗಳು ಕಳೆದರೂ ಕೊಟ್ಟ ಹಣ ವಾಪಸ್ ಬಾರದಿದ್ದಾಗ ಮತ್ತು ಆಕೆಯ ನಡವಳಿಕೆಯಲ್ಲಿ ಅನುಮಾನ ಬಂದಾಗ, ಪುತ್ತೂರಿನ ಯುವಕ ತಾನು ಹಣ ವರ್ಗಾವಣೆ ಮಾಡಿದ ಬ್ಯಾಂಕ್ ಖಾತೆಯ ವಿವರಗಳನ್ನು ತನ್ನ ಸ್ನೇಹಿತರಿಗೆ ತೋರಿಸಿ ವಿಚಾರಿಸಿದ್ದಾನೆ. ಆಗಲೇ ಆತನಿಗೆ ಆಕಾಶವೇ ತಲೆಮೇಲೆ ಬಿದ್ದಂತಾಗಿದ್ದು! ಸ್ನೇಹಿತರು ಪರಿಶೀಲಿಸಿದಾಗ ಆ ಖಾತೆ ಯಾವುದೇ ಹುಡುಗಿಯದ್ದಲ್ಲ, ಬದಲಾಗಿ ಒಬ್ಬ ಹುಡುಗನದ್ದು ಎಂಬ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ!
ಯಾರನ್ನು ಹುಡುಗಿ, ತನ್ನವಳು ಎಂದು ನಂಬಿ ಲಕ್ಷಾಂತರ ರೂಪಾಯಿ ನೀಡಿದ್ದನೋ, ಆಕೆ ಧ್ವನಿ ಬದಲಾಯಿಸಿ ಮಾತನಾಡುತ್ತಿದ್ದ ಒಬ್ಬ ವಂಚಕ ಹುಡುಗ ಎಂದು ತಿಳಿದಾಗ ಯುವಕ ಬೆಚ್ಚಿಬಿದ್ದಿದ್ದಾನೆ.
