
ಸುಬ್ರಹ್ಮಣ್ಯ/ಕಡಬ: ಹರಿಹರ ಪಲ್ಲತ್ತಡ್ಕ ಗ್ರಾಮದ ನಿವಾಸಿ, ನಿವೃತ್ತ ಮುಖ್ಯೋಪಾಧ್ಯಾಯ ಹಾಗೂ ಗ್ರಾಮೀಣ ಭಾಗದ ನೂರಾರು ವಿದ್ಯಾರ್ಥಿಗಳ ಭವಿಷ್ಯದ ದಾರಿದೀಪವಾಗಿದ್ದ ಶ್ರೀಧರ್ ಭಾಗವತ್ (80) ಅವರು ಜೂನ್ 11ರ ತಡರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.


ಗ್ರಾಮೀಣ ಭಾಗದ ಶಿಕ್ಷಣ ಕ್ರಾಂತಿಯ ಹರಿಕಾರ
ಶ್ರೀಧರ್ ಭಾಗವತ್ ಎಂದರೆ ಕೇವಲ ಒಬ್ಬ ಶಿಕ್ಷಕರಲ್ಲ, ಗ್ರಾಮೀಣ ಭಾಗದ ಶಿಕ್ಷಣದ ಶಕ್ತಿಯಾಗಿದ್ದವರು. ಕಡಬದ ಸರಕಾರಿ ಪ್ರೌಢ ಶಾಲೆಯಲ್ಲಿ ಸುದೀರ್ಘ ಕಾಲ ಗಣಿತ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಅವರು, ಕಷ್ಟಕರವಾದ ಗಣಿತ ವಿಷಯವನ್ನು ಗ್ರಾಮೀಣ ಭಾಗದ ಮಕ್ಕಳಿಗೆ ಅತ್ಯಂತ ಸರಳವಾಗಿ ಮನದಟ್ಟು ಮಾಡುತ್ತಿದ್ದರು. ನಗರದ ಸೌಲಭ್ಯಗಳಿಲ್ಲದ ಕಾಲದಲ್ಲಿ, ಹಳ್ಳಿಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಅವರು ಪಟ್ಟ ಶ್ರಮ ಅನನ್ಯವಾದುದು.
ಅವರ ಶಿಸ್ತುಬದ್ಧ ಬೋಧನೆ, ಪ್ರೀತಿಯ ಸ್ವಭಾವದಿಂದಾಗಿ ಅಪಾರ ವಿದ್ಯಾರ್ಥಿ ಬಳಗದ ಮೆಚ್ಚುಗೆಗೆ ಪಾತ್ರರಾಗಿದ್ದರು. ಕೇವಲ ಪಠ್ಯಕ್ಕೆ ಸೀಮಿತವಾಗದೆ, ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ ಮೂಲಕ ನೂರಾರು ಯುವಕರ ಬದುಕಿಗೆ ಆಸರೆಯಾಗಿದ್ದರು. ತದನಂತರ ಮುಖ್ಯೋಪಾಧ್ಯಾಯರಾಗಿ ನಿವೃತ್ತರಾಗಿದ್ದರೂ, ಶಿಕ್ಷಣ ಕ್ಷೇತ್ರದ ಮೇಲಿನ ಅವರ ಒಲವು ಕೊನೆಯವರೆಗೂ ಹಸಿರಾಗಿತ್ತು.


ಧಾರ್ಮಿಕ ಮತ್ತು ಸಾಮಾಜಿಕ ಸೇವೆ : ಶಿಕ್ಷಣ ಕ್ಷೇತ್ರದ ಜೊತೆಗೆ ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದ ಶ್ರೀಧರ್ ಭಾಗವತ್ ಅವರು, ಪ್ರಸಿದ್ಧ ಹರಿಹರೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರಾಗಿ ದೇವಳದ ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಮೃತರು ಪತ್ನಿ ಶ್ರೀಮತಿ ಸುಮಿತ್ರಾ ಭಾಗವತ್, ಪುತ್ರರಾದ ಶರತ್ ಭಾಗವತ್, ಶೈಲೇಶ್ ಭಾಗವತ್, ಪುತ್ರಿ ಶ್ರೀಮತಿ ಶಾಂತಲಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರವು (ಜೂನ್ 12) ಸಂಜೆ ಹರಿಹರ ಪಲ್ಲತ್ತಡ್ಕದ ಸ್ವಗೃಹದ ಆವರಣದಲ್ಲಿ ನಡೆದಿದೆ.
ಗ್ರಾಮೀಣ ಭಾಗದ ಶಿಕ್ಷಣಕ್ಕೆ ಭದ್ರ ಬುನಾದಿ ಹಾಕಿಕೊಟ್ಟ, ಸಾವಿರಾರು ವಿದ್ಯಾರ್ಥಿಗಳ ಪಾಲಿನ ‘ಆರಾಧ್ಯ ಗುರು’ಗಳಾಗಿದ್ದ ಶ್ರೀಧರ್ ಭಾಗವತ್ ಅವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ, ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ನೀಡಲಿ ಎಂದು ನಮ್ಮ ಕಡಬ ಟೈಮ್ಸ್ ಬಳಗ ಪ್ರಾರ್ಥಿಸುತ್ತದೆ.
